ಜೀವನವಿಡೀ ಸಾಧನೆ ಮಾಡುತ್ತಲೇ ಇರಬೇಕೆ?

Success steps
Published on
ಇದು ಅತ್ಯಂತ ಗಹನವಾದ ಪ್ರಶ್ನೆ. ಎಲ್ಲಿಯವರೆಗೆ ಸಾಧನೆ ಮಾಡಬೇಕು? ಜೀವನ ಪರ್ಯಂತ ಸಾಧನೆಯಲ್ಲಿ ತೊಡಗಿರಬೇಕೆ? ಅಥವಾ ಮಧ್ಯೆ ಮಧ್ಯೆ ಸಾಧನೆ ಮಾಡಬೇಕೆ? ಒಂದು ಬಾರಿ ಕೆಲವು ಸಮಯ ಮಾಡಿದ4ರೆ ಸಾಕೆ? ಎಂಬ ಅನೇಕಾನೇಕ ಪ್ರಶ್ನೆಗಳು ಸಾಧಕರಿಗೆ, ಅಧ್ಯಾತ್ಮ ಚಿಂತಕರಿಗೆ ಬರುವುದು ಸಹಜ. ಹೌದು, ಆಧುನಿಕ ಶಿಕ್ಷಣ ಮತ್ತು ತಾಂತ್ರಿಕ ಜ್ಞಾನವನ್ನು ಅಲ್ಪ ಸ್ವಲ್ಪ ಅರಿತವರ ಮನದಲ್ಲಿ ಈ ಪ್ರಶ್ನೆಗಳು ಏಳುತ್ತಿರುತ್ತವೆೆ. ಇತ್ತೀಚೆಗೆ ಮಹಾನ್ ತಂತ್ರಜ್ಞಾನವನ್ನು ಪಡೆದ ವ್ಯಕ್ತಿ ಈ ರೀತಿ ಪ್ರಶ್ನಿಸುತ್ತಾನೆ: ದೇವಸ್ಥಾನ, ಪೂಜೆ ಜೀವನದಲ್ಲಿ ಒಂದು ಬಾರಿ ಕೈಗೊಂಡರೆ ಸಾಲದೆ? ಅದೇ ದೇವರು, ಅದೇ ಅರ್ಚನೆ, ಅದೇ ಆರಾಧನೆ. ಪ್ರತಿನಿತ್ಯ ಏಕೆ ಕೈಗೊಳ್ಳಬೇಕು? ಬಹುಶಃ ಒಂದು ಯಂತ್ರಮಾನವನನ್ನು ರೂಪಿಸಿ ತನ್ಮೂಲಕ ಆ ದೇವತೆಯ ಅರ್ಚನೆ, ಪೂಜೆಯ ಪ್ರೋಗ್ರಾಂ ತಯಾರಿಸಿ ಸುಮ್ಮನೆ ರಿಮೋಟ್​ನ್ನು ಬೇಕಾದಾಗ ಒತ್ತಿದರೆ ಸಾಕಲ್ಲವೇ ಎಂದು.

ಭಗವಾನ್ ಶ್ರೀರಾಮಕೃಷ್ಣ ಪರಮಹಂಸರಿಗೆ ಭಕ್ತನೊಬ್ಬ ಈ ತೆರನಾದ ಪ್ರಶ್ನೆಯನ್ನು ಹಾಕುತ್ತಾನೆ: ಸ್ವಾಮಿ, ಇಡೀ ಜೀವನವೆಲ್ಲಾ ಸಾಧನೆ ಮಾಡಿಕೊಂಡು ಹೋಗುತ್ತಿರಬೇಕೆ? ರಾಮಕೃಷ್ಣರು: ಇಲ್ಲ, ಮೊದಲು ಸ್ವಲ್ಪ ಕಾಲ ಸೊಂಟ ಕಟ್ಟಿರಬೇಕಾಗುತ್ತದೆ. ಬಳಿಕ ಅಷ್ಟು ಶ್ರಮ ತೆಗೆದುಕೊಳ್ಳಬೇಕಾಗಿಲ್ಲ. ಎಲ್ಲಿಯವರೆಗೆ ದೋಣಿ ಅಲೆ, ಬಿರುಮಳೆ, ಬಿರುಗಾಳಿ ಇವುಗಳ ಮೂಲಕ ಅಥವಾ ನದಿ ತಿರುವಿನ ಮೂಲಕ ಹಾದು ಹೊಗಬೇಕಾಗಿರುವುದೋ ಅಲ್ಲಿಯವರೆಗೆ ದೋಣಿ ನಡೆಸುವವ ಎದ್ದು ಚುಕ್ಕಾಣಿ ಹಲಗೆಯನ್ನು ಭದ್ರವಾಗಿ, ಬಿಗಿಯಾಗಿ ಹಿಡಿದುಕೊಂಡಿರಬೇಕಾಗುತ್ತದೆ. ಆದರೆ ಆ ಭಯಾನಕ ತಿರುವು, ಬಿರುಗಾಳಿ, ಬಿರುಮಳೆ, ಅಲೆಗಳನ್ನು ದಾಟಿಯಾದ ನಂತರ ಅಷ್ಟು ಶ್ರಮ ತೆಗೆದುಕೊಳ್ಳಬೇಕಾಗಿಲ್ಲ. ಅದು ಸಂಪೂರ್ಣ ತಿರುವನ್ನು ಹಾದು ನಂತರ ಅನುಕೂಲಕರವಾದ ಗಾಳಿ ಬೀಸಲಾರಂಭಿಸಿದರೆ ಚುಕ್ಕಾಣಿ ಹಲಗೆಯನ್ನು ನೆಪ ಮಾತ್ರ ಕೈಯಲ್ಲಿ ಹಿಡಿದುಕೊಂಡು ಹಾಯಾಗಿ ಕುಳಿತುಕೊಳ್ಳುತ್ತಾನೆ. ಬಳಿಕ ದೋಣಿಯ ಪಟವನ್ನು ಕಟ್ಟಲು ವ್ಯವಸ್ಥೆ ಮಾಡಿ ತಂಬಾಕು ಸೇದಲು ಸಿದ್ದನಾಗುತ್ತಾನೆ. ಇದೇ ತೆರನಾಗಿ ಸಾಧಕ ಕಾಮ-ಕಾಂಚನಗಳ ಭಯಾನಕ ಬಿರುಗಾಳಿ, ಬಿರುಮಳೆ, ಇತ್ಯಾದಿಗಳನ್ನು ದಾಟಿದರೆ, ಅಂದರೆ ಆಗ ಅವನಿಗೆ ನೆಮ್ಮದಿ, ಶಾಂತಿ ಲಭ್ಯ!’

ನಿಜ! ಸಾಧನೆ ಆರಂಭಿಸಿದಾಗ ಭಯಂಕರ ತುಮುಲ ಮನದಲ್ಲಿ ಆರಂಭವಾಗುತ್ತದೆ. ಅದೆಲ್ಲಿಂದಲೋ ಏಕಪ್ರಕಾರವಾಗಿ ನಿಷ್ಪ್ರಯೋಜಕ ಚಿಂತೆಗಳು ಮನಸ್ಸಿನಲ್ಲಿ ಏಳುವುದು ಸಹಜ. ಆದರೆ ಏನೇ ಬರಲಿ ನಾನು ಮಾತ್ರ ಈ ಧ್ಯಾನ ಸ್ಥಿತಿಯಿಂದ ವಿಚಲಿತನಾಗುವುದಿಲ್ಲ ಎಂದು ದೃಢಮನಸ್ಸಿನಿಂದ ಧ್ಯಾನಮಗ್ನನಾದಂತೆ, ಸಾಧಕರು ಸಾಧನೆಯಲ್ಲಿ ಮುಳುಗಿರಬೇಕು, ಮಗ್ನರಾಗಿರಬೇಕು. ಪರಮಹಂಸರು ಈ ವಿಚಾರವನ್ನು ಅತಿ ಸುಲಭವಾಗಿ ಸಾಮಾನ್ಯ ಅಂಬಿಗನ ಯಾತ್ರೆಯಲ್ಲಿ ವಿವರಿಸಿದ್ದಾರೆ. ಭಯಾನಕ ರಭಸವುಳ್ಳ ನದಿಯಲ್ಲಿ ಅಂದರೆ ಈ ಭವಸಾಗರದಲ್ಲಿ ಪಯಣಿಸುವವ ಅತಿ ಎಚ್ಚರಿಕೆಯಿಂದ ತನ್ನ ಗುರಿಯತ್ತ ನಿಶ್ಚಯ ಮನಸ್ಸಿನಿಂದ ಭದ್ರವಾಗಿ ಚುಕ್ಕಾಣಿ ಹಿಡಿದಂತೆ ಮನಸ್ಸನ್ನು ಏಕಾಗ್ರತೆಗೊಳಿಸಿ ಎಲ್ಲ ಅಲೆಗಳನ್ನು, ಬಿರುಗಾಳಿಗಳನ್ನು ಲೆಕ್ಕಿಸದೆ ತನ್ನ ಗುರಿಯತ್ತ ಸಾಗುತ್ತಿರಬೇಕು.

ಯಾವುದೇ ರೀತಿಯ ಮನಃ ಚಂಚಲವಾದಾಗ್ಯೂ ಅದನ್ನು ನಿಗ್ರಹಿಸಿ ಏಕಪ್ರಕಾರವಾಗಿ ಈ ಭವಸಾಗರವನ್ನು ದಾಟುವ ಏಕೈಕ ಗುರಿಯಿಂದ, ಬ್ರಹ್ಮಾನಂದವನ್ನು ಪಡೆಯಲೇಬೇಕೆಂಬ ಹಂಬಲದಿಂದ ಶ್ರಮ ವಹಿಸಬೇಕು. ಮನಸ್ಸು ಶಾಂತವಾಗಿ, ನಿರ್ಮಲವಾಗಿ, ಯಾವುದೇ ಗೊಂದಲ, ಚಿಂತೆ, ಪಲ್ಲಟಗಳಿಲ್ಲದೆ ಸಮುದ್ರದಂತೆ ಶಾಂತವಾಗುತ್ತದೋ ಆ ಸಂದರ್ಭದಲ್ಲಿ ಸ್ವಲ್ಪ ವಿರಮಿಸಿಕೊಂಡು ಮತ್ತೆ ಸಾಧನಾ ಪಥದಲ್ಲಿ ಸಾಗುವುದೇ ನಿಜವಾದ ಅರ್ಥದಲ್ಲಿ ಸಾಧನೆ. ರಾಮಕೃಷ್ಣರು ಈ ಸ್ಥಿತಿಯನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿವರಿಸುತ್ತಾರೆ. ಮನಸ್ಸು ಸ್ಥಿರವಾಗದ ಹೊರತು ಯೋಗಾವಸ್ಥೆ ಬರದು. ಸಂಸಾರದ, ಪ್ರಾಪಂಚಿಕತೆಯ ಗಾಳಿ ಮನಸ್ಸೆಂಬ ದೀಪವನ್ನು ಸರ್ವದಾ ಪಲ್ಲಟಗೊಳಿಸುತ್ತಿರುತ್ತದೆ. ಆ ದೀಪ ಸಂಪೂರ್ಣವಾಗಿ ಅಲ್ಲಾಡದೆ ಇತ್ತು ಎಂದಾಗ ಯೋಗಾವಸ್ಥೆ ಬಂದು ಬಿಡುತ್ತದೆ. ಗಾಳಿ ಬೀಸದಿರುವ ಪ್ರದೇಶದಲ್ಲಿರುವ ದೀಪವು ಹೇಗೆ ಚಲಿಸುವುದಿಲ್ಲವೋ ಆತ್ಮಯೋಗಿಯ ಮನಸ್ಸು ಅದೇ ರೀತಿ. ಸಾಧಕನು ಕ್ರಮೇಣವಾಗಿ ಆ ಹಂತಕ್ಕೆ ತಲುಪುತ್ತಾನೆ.

ಇದು ಅತ್ಯಂತ ಮುಖ್ಯವಾದ ಘಟ್ಟ. ಸಾಧಕ ತನ್ನ ಸಾಧನೆಯನ್ನು ನಿರಂತರವಾಗಿ ಕೈಗೊಂಡಾಗ ಒಂದು ಮಹತ್ತರವಾದ ಸ್ಥಿತಿಗೆ ತಲುಪುತ್ತಾನೆ. ಈ ಸ್ಥಿತಿಯೇ ಯೋಗ. ತೂಗುವ ತಕ್ಕಡಿಯನ್ನು ತೆಗೆದುಕೋ, ಒಂದು ತಟ್ಟೆಗೆ ಭಾರ ಹಾಕಿದರೆ ಕೆಳಗಿನ ಮತ್ತು ಮೇಲಿನ ಮುಳ್ಳು ಒಂದು ಮುಖವಾಗಿರುವುದಿಲ್ಲ. ಕೆಳಗಿನ ಮುಳ್ಳೇ ಮನಸ್ಸು, ಮೇಲಿನ ಮುಳ್ಳೇ ಭಗವಂತ. ಈ ಎರಡೂ ಮುಳ್ಳು ಒಂದೇ ಮುಖವಾದಲ್ಲಿ ಅದೇ ಯೋಗ! ಸಾಧಕನು ತನ್ನ ನಿರಂತರ ಸಾಧನೆಯ ಮೂಲಕ ಮನಸ್ಸನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಂಡು ಭಗವಂತನಲ್ಲಿ ಅಂತರ್ಧಾನನಾಗಿ ಬಿಡುವುದೇ ನಿಜವಾದ ಸಾಧನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net