ಚಳಿಗೆ ಗುಮ್ಮಟನಗರಿ ಗಡಗಡ, ಕನಿಷ್ಠ ತಾಪಮಾನ ಎಷ್ಟು ಗೊತ್ತಾ?

temperature drop
ವಿಜಯಪುರದ ಬಸವೇಶ್ವರ ವೃತ್ತದಲ್ಲಿ ಗ್ರಾಮೀಣ ಭಾಗದ ರೈತಾಪಿ ಜನ ಕೊರೆಯುವ ಚಳಿಯಲ್ಲಿ ತರಕಾರಿ ಮಾರಲು ಹೊರಟಿರುವುದು. ಒಳಗಿನ ದೃಶ್ಯದಲ್ಲಿ ವಿಜಯಪುರ ನಗರದಲ್ಲಿ ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಉರಿ ಕಾಯಿಸಿಕೊಳ್ಳುತ್ತಿರುವುದು.
Published on

ವಿಜಯಪುರ: ಅತೀವೃಷ್ಠಿ-ಅನಾವೃಷ್ಠಿಯಂಥ ಪ್ರಾಕೃತಿಕ ವಿಕೋಪಗಳಿಂದಲೇ ಹೆಸರಾಗಿರುವ ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲೀಗ ಶೀತಗಾಳಿಯ ಅಬ್ಬರ ಜೋರಾಗಿದ್ದು, ಕನಿಷ್ಠ ತಾಪಮಾನ ಶೇ. 8ಕ್ಕೆ ಕುಸಿದಿದೆ. ಪರಿಣಾಮ ಜನರ ಆರೋಗ್ಯದಲ್ಲಿ ಏರುಪಾರು ಉಂಟಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿಯೇ ಅತ್ಯಂತ ಕಡಿಮೆ ತಾಪಮಾನ (8ಡಿ.ಸೆ) ಮಂಗಳವಾರ ದಾಖಲಾಗಿದ್ದು, ಇನ್ನೂ ಮೂರು ದಿನಗಳಲ್ಲಿ ತಾಪಮಾನ ಕನಿಷ್ಠ 7ಕ್ಕಾದರೂ ಕುಸಿಯುವ ಅಂದಾಜಿದೆ. ಹಾಗೇನಾದರೂ ಬಂಗಾಳಕೊಲ್ಲಿಯಲ್ಲಿ ಚಂಡುಮಾರುತ ಬೀಸಿದ್ದೇ ಆದಲ್ಲಿ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬೆಳಗ್ಗೆ 10 ಗಂಟೆಯವರೆಗೂ ಸೂರ್ಯನ ದರ್ಶನವಾಗುತ್ತಿಲ್ಲ. ಮಧ್ಯಾಹ್ನ 1-2 ಗಂಟೆಯಾದರೂ ಚಳಿ ಕಡಿಮೆಯಾಗುತ್ತಿಲ್ಲ. ಮನೆ ಬಿಟ್ಟು ಹೊರಬರದ ಸ್ಥಿತಿ. ಉರಿ ಮತ್ತು ಬಿಸಿಲು ಕಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ದಿನವಿಡೀ ಚಳಿಗಾಲದ ಧಿರಿಸು ಧರಿಸಿಕೊಂಡೇ ಓಡಾಡುವ ಅನಿವಾರ್ಯತೆ. ಅಲರ್ಜಿ, ನೆಗಡಿ, ಕೆಮ್ಮು ಬಾಧೆಯಿಂದ ಮಾತ್ರೆ ನುಂಗುವುದು, ಚಹಾ-ಕಾಫಿ, ಕಷಾಯಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಪತ್ರಿಕೆ, ಹಾಲು, ತರಕಾರಿ ತಡವಾಗಿ ಮನೆ ತಲುಪುತ್ತಿವೆ. ಬೀದಿ ವ್ಯಾಪಾರಿಗಳು ರಗ್ಗು ಹೊದ್ದು, ಉರಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವೆನ್ನಿಸಿದೆ. ಇನ್ನೂ ಎರಡು ದಿನ ಇದೇ ಪರಿಸ್ಥಿತಿ ಮುಂದುವರಿದರೆ ಆರೋಗ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.

ಕಳೆದ ನವೆಂಬರ್‌ನಲ್ಲಿ ತಾಪಮಾನ 10.6ಡಿ.ಸೆ.ಗೆ ಕುಸಿದಿತ್ತು. ಆ ಬಳಿಕ ಡಿಸೆಂಬರ್‌ನಲ್ಲಿ ಚಂಡಮಾರುತದ ಪರಿಣಾಮ 20 ಡಿ.ಸೆ.ಗೆ ತಲುಪಿತು. ಡಿ. 10 ರಿಂದ 11ರವರೆಗೆ ಸರಾಸರಿ 20ರಷ್ಟಿದ್ದ ತಾಪಮಾನ ಕಳೆದ ಎರಡು ದಿನಗಳಲ್ಲಿ ಏಕಾಏಕಿ ಕುಸಿತ ಕಂಡಿದೆ. ಸೋಮವಾರ 8.5ರಷ್ಟಿದ್ದರೆ ಮಂಗಳವಾರ 8 ಡಿ.ಸೆ.ಗೆ ಕುಸಿದಿದೆ. ರಾಜ್ಯ ಹವಾಮಾನ ಇಲಾಖೆಯಿಂದ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇನ್ನೂ ಎರಡು ದಿನ ಶೀತ ಅಲೆಯ ಎಚ್ಚರಿಕೆ ನೀಡಿದೆ.

ಈ ಹಿಂದೆ ಅಂದರೆ 2009ರಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿತ್ತು. ಆಗ ಕನಿಷ್ಠ ತಾಪಮಾನ 5.5ಡಿ.ಸೆ.ಗೆ ಕುಸಿದಿತ್ತು. ಕಾರಣ ಆ ಸಂದರ್ಭ ಪ್ರವಾಹ ಉಂಟಾಗಿತ್ತು. ಬಳಿಕ 2013ರಲ್ಲಿ ಕನಿಷ್ಠ ತಾಪಮಾನ 6.5 ಡಿ.ಸೆ. ದಾಖಲಾಗಿತ್ತು. ಕಳೆದ 2023ರಲ್ಲಿ ಕನಿಷ್ಠ ತಾಪಮಾನ 6.5 ಡಿ.ಸೆ.ಗೆ ಕುಸಿದಿತ್ತು. ಪ್ರಸಕ್ತ ಸಾಲಿನಲ್ಲಿ ಮಂಗಳವಾರ 8 ಡಿ.ಸೆ. ದಾಖಲಾಗಿದ್ದು, ಇನ್ನೂ ಕುಸಿಯುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net