

ವಿಜಯಪುರ: ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಭೀಮಾತೀರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಕೂಡ ಸೇರ್ಪಡೆಯಾಗಿದೆ !
ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಮಂಗಳವಾರ ಸಂಜೆ 6.30ರ ಸುಮಾರಿಗೆ ದೊಡ್ಡ ಪ್ರಮಾಣದ ದರೋಡೆ ನಡೆದಿದೆ. ಗೇಟ್ ಲಾಕ್ ಮಾಡದೇ ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದ ಸಂದರ್ಭ ಒಳನುಗ್ಗಿದ ಮೂವರು ಮುಸುಕುಧಾರಿಗಳು ಸಿಬ್ಬಂದಿಯನ್ನು ಪಿಸ್ತೂಲ್, ಚಾಕು ತೋರಿಸಿ ಹೆದರಿಸಿದ್ದಾರೆ. ಸ್ಟ್ರಾಂಗ್ ರೂಮ್ ಮಾಹಿತಿ ಪಡೆದಿದ್ದಲ್ಲದೇ ಕೈ ಕಟ್ಟಿಹಾಕಿ-ಬಾಯಿ ಬಂದ್ ಮಾಡಿ ಕಳ್ಳತನ ಮಾಡಿದ್ದಾರೆ.
ಕೇವಲ 20 ನಿಮಿಷಗಳ ಒಳಗಾಗಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬಳಿಕ ಗ್ರಾಹಕನೋರ್ವ ಬ್ಯಾಂಕ್ ಒಳಗೆ ಹೋಗಿ ಗಮನಿಸಲಾಗಿ ಸಿಬ್ಬಂದಿಯ ಕೈ ಕಟ್ಟಿ ಹಾಕಿದ್ದು ಮತ್ತು ಬಾಯಿ ಬಂದ್‌ಗೊಳಿಸಿರುವುದು ಕಂಡು ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಚಡಚಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆಂದು ಸ್ಥಳೀಯರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸದ್ಯ ತನಿಖೆ ಮುಂದುವರಿದಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ. ಇತ್ತೀಚೆಗಷ್ಟೇ ಮನಗೂಳಿಯ ಕೆನರಾ ಬ್ಯಾಂಕ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ ನಡೆದಿರುವುದನ್ನು ಈ ಸಂದರ್ಭ ಸ್ಮರಿಸಬಹುದು.