ಯತ್ನಾಳ ವಿರುದ್ಧ ತಿರುಗಿ ಬಿದ್ದ ಸ್ವಜಾತಿ ನಾಯಕರು, ವಿಡಿಯೋ ಬಹಿರಂಗಗೊಳಿಸಿ ಹೇಳಿದ್ದೇನು ಗೊತ್ತಾ?

BJP PANCHAMASALI LEADER PRESSM MEET
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿಯಲ್ಲಿನ ಪಂಚಮಸಾಲಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ವಿಜುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಕಾಸುಗೌಡ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬಿಜೆಪಿಯಲ್ಲಿರುವ ಪಂಚಮಸಾಲಿ ಮುಖಂಡರು ತಿರುಗಿ ಬಿದ್ದಿದ್ದು, ಹಿಂದುತ್ವದ ಮುಖವಾಡ ಕಳಚುವುದರೊಂದಿಗೆ ಅಧಿಕಾರ ಮತ್ತು ಸ್ವಪ್ರತಿಷ್ಠೆಗಾಗಿ ಸಮಾಜವನ್ನು ಬಲಿಕೊಟ್ಟ ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಹಿಂದುತ್ವದ ಬಗ್ಗೆ ಮಾತನಾಡುವ ಯತ್ನಾಳರ ಮುಸ್ಲಿಂ ಪ್ರೇಮ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯತ್ನಾಳರು ಗೋಶಾಲೆ ಹೆಸರಿನಲ್ಲಿ ಪಡೆಯುವ ಲಂಚ, ಅಪ್ಪ-ಮಕ್ಕಳ ವಿರುದ್ಧ ಮಾತನಾಡುವ ಯತ್ನಾಳರು ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿರುವುದು ಮತ್ತು ವಿಜಯಪುರ ನಗರಕ್ಕೆ ಟಿಕೆಟ್ ಕೊಟ್ಟು ಗೆಲ್ಲಿಸಿರುವುದನ್ನು ಸ್ವತಃ ಹೇಳಿಕೊಂಡಿರುವುದು, ಸಂಘ-ಪರಿವಾರದ ವಿರುದ್ಧ ಮಾತನಾಡಿರುವುದು ಸೇರಿದಂತೆ ಹಲವು ವಿಚಾರಗಳನ್ನು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಸುದೀರ್ಘವಾಗಿ ವಿವರಿಸಿದರು.

ಬಬಲೇಶ್ವರ ಕ್ಷೇತ್ರದ ಪರಾಜಿತ ಅಭ್ಯರ್ಥಿಯೂ ಆಗಿರುವ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಎರಡ್ಮೂರು ನೊಟೀಸ್ ಕೊಟ್ಟರೂ ಬಾಯಿಗೆ ಲಗಾಮಿಲ್ಲದೇ ಹಂದಿ ರೀತಿ ಮಾತನಾಡುವ ಯತ್ನಾಳ ಬಿಜೆಪಿಯಲ್ಲಿ ಬಳುವ (ಪಕ್ಷಿ) ಹೊಕ್ಕಂತಾಗಿತ್ತು. ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ. ಪಾಟೀಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ವಪಕ್ಷೀಯರನ್ನೇ ಸೋಲಿಸಿದ ಇವರನ್ನು ಪಕ್ಷ ಉಚ್ಚಾಟನೆ ಮಾಡುವ ಮೂಲಕ ಬಳುವ ಹೊರಹಾಕಿದಂತಾಗಿದೆ. ಇವರ ಹೊಂದಾಣಿಕೆ ರಾಜಕಾರಣಕ್ಕೆ ಪಕ್ಷ ಬಲಿಯಾಯಿತು. ಬಬಲೇಶ್ವರದಲ್ಲಿ ನನ್ನ ಸೋಲಿಗೆ ಕಾರಣರಾದವರು ಇದೇ ಯತ್ನಾಳ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಂದು ಹರಿಹಾಯ್ದರು.

ವಿಡಿಯೋ ಪ್ರಸಾರ

ಬಿ.ಎಸ್. ಯಡಿಯೂರಪ್ಪ ಕಾಲಿಗೆ ಬಿದ್ದಿರುವ ಯತ್ನಾಳರ ವಿಡಿಯೋ ಬಿಡುಗಡೆಗೊಳಿಸಿದ ವಿಜುಗೌಡ ಪಾಟೀಲರು, ಬಿ.ಎಸ್. ಯಡಿಯೂರಪ್ಪ ಅವರೇ ವಿಜಯಪುರ ನಗರ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆಂಬ ಹೇಳಿಕೆಯ ತುಣುಕು ಪ್ರದರ್ಶಿಸಿದರು. ಅಲ್ಲದೇ, ಆರ್‌ಎಸ್‌ಎಸ್ ಮತ್ತು ಹಿಂದುತ್ವದ ನಾಯಕರನ್ನು ಟೀಕಿಸಿರುವ, ಹಿಂದುತ್ವದ ಹಿರಿಯ ನಾಯಕ ಗೋಪಾಲ್ ಜಿ ಅವರನ್ನು ಟೀಕಿಸಿರುವ ವಿಡಿಯೋ ತುಣುಕು ಬಹಿರಂಗಗೊಳಿಸಿದರು. ಇನ್ನೂ ಇಂಥ ಅನೇಕ ವಿಡಿಯೋ ಇದ್ದು ಈಗಲೇ ಬಿಡುಗಡೆ ಮಾಡಲ್ಲ ಎಂದರು.

ಮುಂದುವರಿದು ಯಡಿಯೂರಪ್ಪ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಯತ್ನಾಳರಿಗಿದೆಯೇ? ಎಂದರು.

ಇಡೀ ದಿನ ಮುಸ್ಲಿಂರನ್ನು ಬೈಯ್ಯೋದು ರಾತ್ರಿ ಅವರ ಮನೆಯಿಂದಲೇ ಡಬ್ಬಿ ತರಿಸಿ ಊಟ ಮಾಡೋದು ಯತ್ನಾಳ. ರಾಜ್ಯ ನಾಯಕ ಎಂದು ಹೇಳಿಕೊಳ್ಳುವ ಯತ್ನಾಳ ಇಡೀ ರಾಜ್ಯದಲ್ಲಿ ಒಬ್ಬರಿಗಾದರೂ ಶಾಸಕ ಮಾಡಿದ್ದಾರೆಯೇ? ಸ್ಟಾರ್ ಪ್ರಚಾರಕ ಎಂದೆಲ್ಲ ಹೇಳಿಕೊಂಡು ಹೋದಲ್ಲೆಲ್ಲ ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದರು. ಇವರಿಂದ ಬಿಜೆಪಿಗೆ ಯಾವುದೇ ಲಾಭವಿಲ್ಲ ಎಂದರು.

ಭ್ರಷ್ಟಾಚಾರದ ಹೂರಣ

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯತ್ನಾಳ ಕಗ್ಗೋಡದ ಗೋಶಾಲೆಯ ಹೆಸರಲ್ಲಿ ಲಂಚ ಪಡೆಯುತ್ತಾರೆಂದು ಆರೋಪಿಸಿದ ವಿಜುಗೌಡರು, ‘ನಾನು ಹಣ ಮುಟ್ಟಲ್ಲ ಕಗ್ಗೋಡದ ಗೋಶಾಲೆಗೆ ಕೊಡಿ’ ಎಂದು ಯತ್ನಾಳ ಹೇಳುತ್ತಾರೆ. ಗೋಶಾಲೆಯಲ್ಲಿರುವ ದನಗಳೇನು ಹಣ ತಿನ್ನುತ್ತವೆಯೇ? ಎಂದರು.

ಸಚಿವ ಎಂ.ಬಿ. ಪಾಟೀಲ ಹಾಗೂ ಯತ್ನಾಳರು ಜಂಡಿಯಾಗಿ ಮಹಾನಗರ ಪಾಲಿಕೆಯ ಆಡಳಿತವನ್ನೇ ಕುಸಿಯುವಂತೆ ಮಾಡಿದರು. ಸದಸ್ಯರನ್ನೇ ಅನರ್ಹಗೊಳಿಸಿದರು. ಆ ಮೂಲಕ ಜಿಲ್ಲೆಗೆ ಬಂದ ಅನುದಾನವನ್ನು ಇಬ್ಬರೇ ಹೊಡೆಯುವ ಹುನ್ನಾರ ನಡೆಸಿದ್ದು ಜಗಜ್ಜಾಹೀರು ಎಂದರು.

ಹೊಂದಾಣಿಕೆ ರಾಜಕಾರಣ

ಬಬಲೇಶ್ವರ ಕ್ಷೇತ್ರದಲ್ಲಿ ಎಂ.ಬಿ. ಪಾಟೀಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನನ್ನನ್ನು ಸೋಲಿಸಿದರು. ಮುದ್ದೇಬಿಹಾಳ ಕ್ಷೇತ್ರದಲ್ಲಿ ಎ.ಎಸ್. ಪಾಟೀಲ ನಡಹಳ್ಳಿ ಅವರನ್ನು ಸೋಲಿಸಿದ್ದು ಯಾರು? ದಿ.ಬಿ.ಆರ್. ಪಾಟೀಲರ ಪುತ್ರ ಸಂಜಯ ಪಾಟೀಲ ಕನಮಡಿ ಅವರನ್ನು ಸೋಲಿಸಿದ್ದು ಯಾರು? ಎಂದು ವಿಜುಗೌಡ ಪ್ರಶ್ನಿಸಿದರು.

ಇಂಡಿಯ ಪರಾಜಿತ ಅಭ್ಯರ್ಥಿ ಕಾಸುಗೌಡ ಪಾಟೀಲ ಮಾತನಾಡಿ, ಇಂಡಿಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ನನ್ನನ್ನು ಸೋಲಿಸಿದರು. ಪ್ರಚಾರಕ್ಕೆ ಕರೆದರೂ ಬರಲಿಲ್ಲ. ಬೆಂಬಲಿಗರ ಮೂಲಕ ಕಾಂಗ್ರೆಸ್ ಚುನಾವಣೆ ಮಾಡಿದ್ದಾರೆಂದು ಆಪಾದಿಸಿದರು. ಮುಖಂಡ ಸಂಜಯ ಪಾಟೀಲ ಕನಮಡಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿರುವುದು ಯತ್ನಾಳ ಹಾಗೂ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ. ಆಗ ಪಂಚಮಸಾಲಿ ಸಮಾಜ ನೆನಪಿಗೆ ಬರಲಿಲ್ಲವೇ ಎಂದು ಹರಿಹಾಯ್ದರು.

ಸ್ವಾಮೀಜಿ ವಿರುದ್ಧ ವಾಗ್ದಾಳಿ

ಕೂಡಲ ಸಂಗಮ ಸ್ವಾಮೀಜಿ ಹಾಗೂ ಯತ್ನಾಳರು ಸ್ವಜಾತಿಯವರನ್ನೇ ತುಳಿದಿದ್ದಾರೆ. ಯತ್ನಾಳರು ಸಮಾಜದ ಎಷ್ಟು ಬಡವರಿಗೆ ಹಣ ಪಡೆದುಕೊಳ್ಳದೇ ತಮ್ಮ ಬ್ಯಾಂಕ್‌ನಲ್ಲಿ ಕೆಲಸ ಕೊಟ್ಟಿದ್ದಾರೆಂದು ಹೇಳಲಿ ನೋಡೋಣ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಿಂದುತ್ವದ ಪದವನ್ನೇ ಬಳಸಲ್ಲ. ಹಿಂದು ಆಚರಣೆಯಾದ ನಾಗರ ಪಂಚಮಿ ದಿನ ನಾಗದೇವತೆಗೆ ಹಾಲೆರೆಯುವುದನ್ನೇ ವಿರೋಧಿಸಿದ್ದ ಇವರು ಅಂದು ಮಕ್ಕಳಿಗೆ ಹಾಲು ಕುಡಿಸಿ ಎನ್ನುತ್ತಿದ್ದರು. ಇದೀಗ ಯತ್ನಾಳರ ಭಾವಚಿತ್ರಕ್ಕೆ ಲೀಟರ್‌ಗಟ್ಟಲೆ ಹಾಲು ಸುರಿದು ಹಾಳು ಮಾಡುತ್ತಿದ್ದರೂ ಸುಮ್ಮನಿದ್ದಾರೆ ಎಂದು ಮುಖಂಡರು ಲೇವಡಿ ಮಾಡಿದರು.

ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ- ಧಾರವಾಡ ಬಾಗಿಲು ಬಂದ್ ಆಗಿದ್ದು, ವಿಜಯಪುರದ ಬಾಗಿಲೊಂದೇ ನಿಮಗಿರೋದು. ಇದೀಗ ಅದು ಸಹ ಬಂದ್ ಆಗೋದರಲ್ಲಿ ಅನುಮಾನವಿಲ್ಲ ಎಂದರಲ್ಲದೇ, ವಿಜುಗೌಡ ಪಾಟೀಲರು ‘ಸ್ವಾಮೀಜಿ ಯತ್ನಾಳರೊಬ್ಬರನ್ನೇ ಬೆನ್ನು ಹತ್ತಿರೋದು ನೋಡಿದರೆ ಅವರ ವೀಕ್‌ನೆಸ್ ಯತ್ನಾಳ ಬಳಿ ಇದೆ’ ಎನ್ನಿಸುತ್ತದೆ ಎಂದರು.

ಮುಖಂಡರಾದ ಭೀಮಾಶಂಕರ ಹದನೂರ, ಸುರೇಶ ಬಿರಾದಾರ, ಮುತ್ತು ಜಂಗಮಶೆಟ್ಟಿ, ವಿಶ್ವನಾಥ ಕಪ್ಪದ, ರವಿಕಾಂತ ಬಗಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net