ಎಂಎಸ್​ಪಿ ಅಂದ್ರೇನು ಗೊತ್ತಾ?; ಹಿಂಗಾರು-ಮುಂಗಾರು ವ್ಯತ್ಯಾಸ ಅರಿವಿದೆಯೇ? | ರಾಹುಲ್​ಗೆ ಷಾ ಪ್ರಶ್ನೆ

amith sha
Published on

ರೇವಾರಿ: ‘ಎಂಎಸ್​ಪಿ ಎಂಎಸ್​ಪಿ ಎನ್ನುತ್ತಿದ್ದರೆ ವೋಟು ಬರುತ್ತವೆ ಅಂತ ಯಾವುದೋ ಎನ್​ಜಿಒದವರು ರಾಹುಲ್ ಬಾಬಾಗೆ ಹೇಳಿಬಿಟ್ಟಿದ್ದಾರೆ. ರಾಹುಲ್ ಬಾಬಾ.. ನಿಮಗೆ ಎಂಎಸ್​ಪಿ ಅಂದರೆ ಏನು ಅಂತ ಗೊತ್ತಾ? ಹಿಂಗಾರು ಬೆಳೆ ಯಾವುವು, ಮುಂಗಾರು ಬೆಳೆಗಳು ಯಾವುವು ಎಂಬುದೇನಾದರೂ ಗೊತ್ತಾ..?’

ಇವು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೇಳಿದ ಪ್ರಶ್ನೆಗಳು. ವಿಧಾನಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಷಾ, ಹರಿಯಾಣದಲ್ಲಿ ಬಿಜೆಪಿ ಸರ್ಕಾರ 24 ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್​ಪಿ) ಖರೀದಿಸುತ್ತಿದೆ. ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳನ್ನು ಕರ್ನಾಟಕ ಅಥವಾ ತೆಲಂಗಾಣ ಕಾಂಗ್ರೆಸ್ ಸರ್ಕಾರಗಳು ಖರೀದಿಸುತ್ತಿವೆಯೇ ಎಂದು ಪ್ರಶ್ನಿಸಿದರು. ಹರಿಯಾಣದಲ್ಲಿ ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಕೊನೆಗೊಳಿಸಿದೆ. ಹಿಂದೆ ಇಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ಡೀಲರ್​ಗಳು, ದಲಾಲ್​ಗಳು (ಮಧ್ಯವರ್ತಿಗಳು), ದಾಮಾದ್​ಗಳು (ಅಳಿಯಂದಿರು) ಆಳುತ್ತಿದ್ದರು. ಬಿಜೆಪಿ ಆಡಳಿತದಲ್ಲಿ ಅವರಿಗೆಲ್ಲ ಅವಕಾಶವಿಲ್ಲ ಎಂದು ಷಾ ಹೇಳಿದರು.

ಅಗ್ನಿವೀರ ಯೋಜನೆ ವಿಷಯದಲ್ಲಿಯೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ರಾಹುಲ್ ಗಾಂಧಿ ಅವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಜಾರಿ ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ. ಆದರೆ ರಾಹುಲ್ ಗಾಂಧಿಯವರ ಮೂರನೇ ಪೀಳಿಗೆ ಬಂದರೂ ಅದು ಸಾಧ್ಯವಿಲ್ಲ ಎಂದರು. ಉಗ್ರಗಾಮಿಗಳನ್ನು, ಕಲ್ಲು ತೂರುವವರನ್ನು ಬಿಡುಗಡೆ ಮಾಡುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ. ಅದೇನು ತಮಾಷೆಯ ವಿಷಯವೇ? ಕಾಶ್ಮೀರದಲ್ಲಿ 40 ಸಾವಿರ ಜನರ ಹತ್ಯೆಯಾಗಿದೆ. ನೂರಾರು ಯೋಧರು ಹುತಾತ್ಮರಾಗಿದ್ದಾರೆ. ಆದರೂ ಉಗ್ರಗಾಮಿಗಳನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಷಾ ದೂರಿದರು.

ಇದು ಹೊಸ ಭಾರತ, ಭಯೋತ್ಪಾದನೆ ಸಹಿಸುವುದಿಲ್ಲ ಯೋಗಿ ಎಚ್ಚರಿಕೆ

ಜಮ್ಮು: ಭಾರತದಲ್ಲಿ ಹಿಂಸಾಚಾರ ಪ್ರಚೋದಿಸುವ ವರನ್ನು ನಿಮೂಲನೆ ಮಾಡಲಾಗುವುದು ಎಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಮ್ುರ ಜಿಲ್ಲೆಯ ರಾಮ್ಗರ ಪ್ರದೇಶದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು ಈ ಸಂದೇಶ ರವಾನಿಸಿದ್ದಾರೆ.

ಪಾಕ್ ಬೆಂಬಲಿತ ಉಗ್ರರು ದೇಶದಲ್ಲಿ ಎಲ್ಲೇ ಭಯೋತ್ಪಾದಕ ಚಟುವಟಿಕೆ ನಡೆಸಿದರೂ ಅವರು ದುರಂತ ಅಂತ್ಯ ಕಾಣುತ್ತಾರೆ ಎಂದ ಯೋಗಿ, ಇದು ಹೊಸ ಭಾರತ, ಭಯೋತ್ಪಾದನೆಯನ್ನು ಸಹಿಸಿಕೊಳ್ಳುವ ಬದಲು ಅದನ್ನು ಹೊಸಕಿ ಹೂತು ಹಾಕುತ್ತದೆ ಎಂದು ಹೇಳಿದರು. ಈ ಹೊಸ ಭಾರತ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ, ಇಲ್ಲಿ ಸುರಕ್ಷತೆಗೆ ಪ್ರಮುಖ ಆದ್ಯತೆ ಎಂದೂ ಹೇಳಿದರು.

ಭ್ರಷ್ಟಾಚಾರ, ಭಯೋತ್ಪಾದನೆ, ಪ್ರತ್ಯೇಕತಾ ವಾದ, ವಂಶಾಡಳಿತದ ಹಳೆಯ ದಿನಗಳು ಇನ್ನು ಮರುಕಳಿಸಲು ಸಾಧ್ಯವಿಲ್ಲ. ಮೂರು ಕುಟುಂಬ ಗಳಿಗೆ ವಿದಾಯ ಹೇಳಲು ಜನರು ನಿರ್ಧರಿಸಿದ್ದು, ಈ ಚುನಾವಣೆಯ ನಂತರ ಅವರ ನಿರ್ಗಮನ ಖಚಿತವಾಗಲಿದೆ ಎಂದು ಸಿಎಂ ಯೋಗಿ ತಿಳಿಸಿದರು. ಡಬಲ್ ಇಂಜಿನ್ ಸರ್ಕಾರಕ್ಕೆ ಉತ್ತಮ ಉದಾಹರಣೆ ಎಂದರೆ ಉತ್ತರಪ್ರದೇಶದಲ್ಲಿ 500 ವರ್ಷಗಳ ಬಳಿಕ ನಿರ್ಮಾಣ ಆಗಿರುವ ರಾಮಮಂದಿರ. ರಾಮಮಂದಿರ ನಿರ್ವಣಕ್ಕೆ ಮುಂದಾದರೆ ರಕ್ತದ ಹೊಳೆ ಹರಿಯುತ್ತದೆ ಎಂದಿದ್ದರು. ಆದರೆ ಕಳೆದ ಏಳೂವರೆ ವರ್ಷಗಳಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕೂಡ ಡಬಲ್ ಇಂಜಿನ್ ಸರ್ಕಾರದಲ್ಲೇ ಅಂಥದ್ದೇ ಅಭಿವೃದ್ಧಿ ಆಗಲಿದೆ ಎಂದು ಆದಿತ್ಯನಾಥ ಹೇಳಿದರು.

ಉದ್ಯೋಗ- ಕೈಗಾರಿಕೆಗಳ ನಾಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಮಾದರಿ ಆಡಳಿತದಿಂದಾಗಿ ದೇಶದಲ್ಲಿ ಉದ್ಯೋಗಾವಕಾಶಗಳೇ ನಾಶವಾಗಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ಮೋದಿ ನೀತಿಗಳಿಂದಾಗಿ ದೇಶದಲ್ಲಿರುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತೀವ್ರ ತೊಂದರೆಗೀಡಾಗಿವೆ. ಜನರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಚೀನಾದೊಂದಿಗೆ ಸ್ಪರ್ಧೆ ಒಡ್ಡುವುದು ಭಾರತಕ್ಕೆ ಸಾಧ್ಯವಿಲ್ಲ ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದೂರಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯವಸ್ಥೆ ಸರಳಗೊಳಿಸುವ ಅವಶ್ಯಕತೆ ಇದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ತೆರೆದಿಡ ಬೇಕಾಗಿದೆ. ಇದರಿಂದ ವ್ಯಾಪಕ ಅವಕಾಶಗಳು ಮತ್ತು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಐದರಿಂದ ಹತ್ತು ದೊಡ್ಡ ಕಂಪನಿಗಳು ದೇಶದ ವ್ಯಾಪಾರ ವಹಿವಾಟಿನ ಮೇಲೆ ಏಕಸ್ವಾಮ್ಯ ಸಾಧಿಸುತ್ತಿವೆ. ಇದಕ್ಕೆ ಇಲ್ಲಿನ ರಾಜಕೀಯ ವ್ಯವಸ್ಥೆಯೂ ಬೆಂಬಲವಾಗಿ ನಿಂತಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಸಂಸ್ಥೆಗಳಿಗೆ ಇದರಿಂದ ನಷ್ಟವಾಗುತ್ತಿದೆ. ಹಾಗಾಗಿ ಉದ್ಯೋಗಾವಕಾಶಗಳೂ ಕಡಿಮೆ ಆಗುತ್ತಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ತಾವು ಸ್ಟಾರ್ಟಪ್ ಒಂದರ ಜತೆ ನಡೆಸಿದ ಸಂವಾದದ ವಿಡಿಯೋವನ್ನೂ ರಾಹುಲ್ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net