

ಕೋತಿಗಳು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಿದ್ದಾಯ್ತು, ಮತ್ತೊಂದು ಮಂಗ ಟೆರೇಸ್ ಮೇಲೆ ಕುಳಿತು ಬಿಂದಾಸ್ ಆಗಿ ಗಾಳಿಪಟ ಹಾರಿಸಿದ್ದಾಯ್ತು...ಈಗ ಇನ್ನೊಂದು ಇಂಟರೆಸ್ಟಿಂಗ್ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಅದೂ ಕಾಡಿನ ರಾಜ ಸಿಂಹಕ್ಕೆ ಸಂಬಂಧಪಟ್ಟಿದ್ದು...!
ಸುಖ ನಿದ್ರೆಯಲ್ಲಿ ಮೈಮರೆತ ಸಿಂಹ ಗೊರಕೆ ಹೊಡೆಯುವ ವಿಡಿಯೋ ಇದಾಗಿದ್ದು ಐಎಫ್ಎಸ್ ಅಧಿಕಾರಿ ಸುಂಸಾಂತಾ ನಂದಾ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ತುಂಬ ಅಪರೂಪದ ದೃಶ್ಯ. ಗೊರಕೆಯೆಂಬುದು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳನ್ನೂ ಕಾಡುತ್ತವೆ ಎಂಬುದು ಸಾಬೀತಾಯಿತು.
ಕಾಡಿನಲ್ಲಿ ಆರಾಮಾಗಿ ನಿದ್ರೆ ಮಾಡುತ್ತಿರುವ ಸಿಂಹವೊಂದು ದೊಡ್ಡದಾಗಿ ಗೊರಕೆ ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದು ಹೀಗೆ ಗೊರಕೆ ಹೊಡೆಯುವಾಗ ಅದರ ಇಡೀ ದೇಹ ಕಂಪಿಸುವುದನ್ನು ನೋಡಬಹುದು.
ವಿಡಿಯೋ ಪೋಸ್ಟ್ ಮಾಡಿರುವ ಸುಸಾಂತಾ ನಂದಾ ಅವರು, ಈ ರಾಜನ ಘರ್ಜನೆಗಿಂತ ಗೊರಕೆ ಸದ್ದಿನ ಆರ್ಭಟವೇ ಹೆಚ್ಚು ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಸಾಮಾನ್ಯವಾಗಿ ಕಾಡಿನಲ್ಲಿರುವ ಸಿಂಹಗಳು 18-20 ತಾಸು ನಿದ್ರಿಸುತ್ತವೆ. ಹಾಗೇ ಪ್ರಾಣಿಸಂಗ್ರಹಾಲಯದಲ್ಲಿ ಇರುವ ಸಿಂಹಗಳು ಇನ್ನೂ ಕಡಿಮೆ ಅವಧಿ ನಿದ್ರಿಸುತ್ತವೆ. ಆದರೆ ಹೆಣ್ಣು ಸಿಂಹಗಳು ತಮ್ಮ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಕೇವಲ 12 ತಾಸು ಮಾತ್ರ ನಿದ್ರಿಸುತ್ತವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈಗ ಗೊರಕೆ ಹೊಡೆಯುತ್ತಿರುವ ಸಿಂಹ ಸುದೀರ್ಘ ಕನಸಿನಲ್ಲಿ ತೇಲಾಡುತ್ತಿದೆ ಎಂದು ಜೋಕ್ ಮಾಡಿದ್ದಾರೆ.
ಸಿಂಹ ಗರ್ಜನೆಗೂ, ಗೊರಕೆಗೂ ಹೆಚ್ಚೇನೂ ವ್ಯತ್ಯಾಸ ಕಾಣಿಸುವುದಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಅನೇಕರು ತಾವು ಹಿಂದೆಂದೂ ಇಂತಹ ದೃಶ್ಯ ನೋಡಿರಲೇ ಇಲ್ಲ ಎಂದಿದ್ದಾರೆ. ವಿಡಿಯೋ ಈಗಾಗಲೇ 8 ಸಾವಿರಕ್ಕೂ ಅಧಿಕ ವೀವ್ಸ್ ಪಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)