

ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ಆರೋಪ ಹಾಗೂ ತನಿಖೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಳೆದ ಒಂದೂವರೆ ವರ್ಷದಿಂದ ಇವರು ಮಾಡಿದ್ದು ಏನು? ಸಿದ್ದರಾಮಯ್ಯ ಈಗೇಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಕಾಂಗ್ರೆಸ್ ಒಂದೂವರೆ ವರ್ಷದ ಆಡಳಿತದ ಬಳಿಕ ದ್ವೇಷ ರಾಜಕಾರಣ ಮಾಡುತ್ತಿದೆ. ಮುಡಾ ಹಗರಣ ಗಂಭೀರತೆ ಪಡೆದುಕೊಂಡಿದೆ, ಇಡಿ ತನಿಖೆ ಜೋರಾಗಿದೆ, ವಾಲ್ಮೀಕಿ ನಿಗಮದ ಹಗರಣವನ್ನು ಹೈಕೋರ್ಟ್ ನಿಗಾದಲ್ಲಿ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಹೀಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆಂದು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಇಷ್ಟು ದಿನ ಅವರು ಮತ್ತು ಇವರು ಹೊಂದಾಣಿಕೆಯಿಂದ ಇದ್ದರು. ನಮ್ಮದನ್ನು ನೀವು ಮುಚ್ಚಿಡೋದು ನಿಮ್ಮದನ್ನ ನಾವು ಮುಚ್ಚಿಡೋದು ಎಂಬ ಒಪ್ಪಂದವಿತ್ತು. ಆ ಕರಾರು ಮುರಿದು ಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದ ಯತ್ನಾಳ, ರಾಜಕೀಯ ನಿವೃತ್ತಿಯಾಗಿರುವ ಯಡಿಯೂರಪ್ಪರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಮಂಡ್ಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ರಕ್ತದ ಪತ್ರ ಚಳುವಳಿಗೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ, ಮಾಧ್ಯಮದವರು ಆ ರಕ್ತ ಈ ರಕ್ತ ಎಂದು ಸುದ್ದಿ ಮಾಡಿದರು. ಅದು ಯಾವ ರಕ್ತ ಇದೆಯೋ ಯಾರಿಗೆ ಗೊತ್ತು? ಅದು ಅವರದ್ದೇ ರಕ್ತ ಇದೆಯೋ ಅಥವಾ ಬೇರೆ ಯಾರದ್ದಾದರೂ ರಕ್ತ ಇದೆಯೋ ಗೊತ್ತಿಲ್ಲ ಎಂದರು.
ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನೂ ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಮೊದಲು ಮಂಡ್ಯದಲ್ಲಿ ನಮ್ಮ ಪಕ್ಷದ ನಾಲ್ಕು ಶಾಸಕರನ್ನಾಗಿ ಮಾಡಿ. ಮಂಡ್ಯದಲ್ಲಿರುವ ಭೂಕನಕೆರೆ ವಿಜಯೇಂದ್ರನ ಅಪ್ಪನ ಊರು. ಅಲ್ಲಿಯೇ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಲ್ಲ ಎಂದು ಯತ್ನಾಳ ಕುಟುಕಿದರು.
ಶಿವಮೊಗ್ಗದಲ್ಲಿ ಅಥವಾ ಶಿಕಾರಿಪುರದಲ್ಲಿ ರಕ್ತದಲ್ಲಿ ಪತ್ರ ಬರೆದಿದ್ದರೆ ಒಂದು ಔಚಿತ್ಯವಿತ್ತು. ಯಾವ ಬಿಜೆಪಿಯ ಜನಪ್ರತಿನಿಧಿಯೂ ಇಲ್ಲದ ಮಂಡ್ಯದಲ್ಲಿ ಕೇವಲ ಆರು ಜನರು ಕೈಗೆ ಚುಚ್ಚಿಕೊಂಡು ರಕ್ತದಲ್ಲಿ ಪತ್ರ ಬರೆಯುತ್ತಿದ್ದಾರೆ, ದುಡ್ಡು ಪಡೆದುಕೊಂಡು ಹೀಗೆ ಮಾಡುತ್ತಿದ್ದಾರೆ. ಯಾರು ಏನು ಬೇಕಾದರೂ ಮಾಡಲಿ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ವಂಶವಾದ ಹಾಗೂ ಭ್ರಷ್ಟಾಚಾರ ರಾಜಕಾರಣದ ವಿರುದ್ಧ ಹೋರಾಡುವೆ. ಅದು ನಮ್ಮ ಪಕ್ಷವೇ ಇರಲಿ ಅಥವಾ ಬೇರೆ ಪಕ್ಷವೇ ಆಗಿರಲಿ ಎಂದು ಯತ್ನಾಳ ಹೇಳಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ನನ್ನ ಹೊಂದಾಣಿಕೆ ಇಲ್ಲ. ಹಾಗಿದ್ದಿದ್ದೇ ಆದರೆ ನನ್ನ ಸಕ್ಕರೆ ಕಾರ್ಖಾನೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನನ್ನ ಮೇಲೆ 42 ಕೇಸ್‌ಗಳನ್ನ ಸಿಎಂ ಹಾಗೂ ಡಿಸಿಎಂ ಹಾಕುತ್ತಿರಲಿಲ್ಲ. ವಿಜಯೇಂದ್ರನ ಮೇಲೆ ಒಂದೇ ಒಂದು ಕೇಸ್ ಹಾಕಿಲ್ಲ. ಯಡಿಯೂರಪ್ಪ ವಿರುದ್ಧ ಎಷ್ಟೇ ಗಂಭೀರ ಪ್ರಕರಣಗಳಿದ್ದರೂ ಮುಚ್ಚಿಟ್ಟಿದ್ದರು. ಇದೀಗ ಬಿಎಸ್‌ವೈ ಪ್ರಕರಣ ತೆಗೆಯುತ್ತಿದ್ದಾರೆ. ಅವರವರದ್ದು ಹಳಸಿದೆ, ಹಳಸಿದ್ದಕ್ಕೆ ಹಸಿದಿದ್ದಕ್ಕೆ ಒಂದಾಗಿವೆ ಎಂದರು.
ಮಾಜಿ ಶಾಸಕ ರೇಣುಕಾಚಾರ್ಯ ನಡೆಸಿದ ವಾಗ್ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯತ್ನಾಳ, ಅಂಥ ‘ಲಪೂಟ್’ರ ಬಗ್ಗೆ ಕೇಳಬೇಡಿ. ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರೋರ ಬಗ್ಗೆ ಪ್ರಶ್ನೆ ಕೇಳಿ ಎಂದರು.