

ಚಿಕ್ಕಬಳ್ಳಾಪುರ: ಜಿಲ್ಲೆಯ ನಾಗರಿಕರಿಗೆ ಸರಳ, ತ್ವರಿತ ಮತ್ತು ವಿಶ್ವಾಸಾರ್ಹ ವ್ಯವಸ್ಥೆಯಲ್ಲಿ ಹಲವು ಸೇವೆಗಳನ್ನು ಒದಗಿಸಲು ಜಿಲ್ಲಾ ಪೊಲೀಸ್ ಇಲಾಖೆಯು ವಾಟ್ಸಾಪ್ ಪೊಲೀಸ್ ಚಾಟ್‌ಬಾಟ್ ಕಾರ್ಯ ನಿರ್ವಹಣೆಗೆ ಚಾಲನೆ ನೀಡಿದೆ.
ನಮ್ಮ ಕಾಪ್ 24x7, ಪೊಲೀಸ್ ವಾಟ್ಸಾಪ್ ಚಾಟ್ ಬಾಟ್ (ಮೊ.ಸಂಖ್ಯೆ: 9480802538) ಅನ್ನು ಸಂಪರ್ಕಿಸಿದರೆ ಜನರಿಗೆ ಪೊಲೀಸ್ ಸೇವೆಯು ಲಭಿಸುತ್ತದೆ.
*ಪ್ರಮುಖ ವೈಶಿಷ್ಟ್ಯಗಳು
ತುರ್ತು ಸಹಾಯ (ಪೊಲೀಸ್, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಸೇವೆಗಳನ್ನು ತಲುಪಲು ತ್ವರಿತ ಮಾರ್ಗದರ್ಶನ), ಕಾನೂನು ಮಾಹಿತಿ(ಸಾಮಾನ್ಯ ಕಾನೂನುಗಳು ಮತ್ತು ನಾಗರಿಕ ಹಕ್ಕುಗಳ ಸುಲಭ ಮಾಹಿತಿ), ಸೈಬರ್ ಅಪರಾಧ ಪ್ರಕರಣಗಳು ( ಆನ್‌ಲೈನ್ ವಂಚನೆಗಳು, ಕಿರುಕುಳ ಮತ್ತು ವಂಚನೆಗಳನ್ನು ವರದಿ ಮಾಡುವ ಕುರಿತು ಹಂತ-ಹಂತದ ಮಾರ್ಗದರ್ಶನ), ಸಾರ್ವಜನಿಕ ಸೇವೆಗಳು(ಪಾಸ್‌ಪೋರ್ಟ್ ಪರಿಶೀಲನೆ, ಪೊಲೀಸ್ ಪರಿಶೀಲನೆ, ಕಳೆದುಹೋದ ಮತ್ತು ಪತ್ತೆಯಾದ ವಸ್ತುಗಳು, ಎನ್ ಒಸಿಗಳು ಮತ್ತು ಇತರ ಮಾಹಿತಿ), ನಾಗರಿಕ ಸಂವಹನ (ಪ್ರತಿಕ್ರಿಯೆ ಸ್ವೀಕಾರ, ಕುಂದುಕೊರತೆಗಳ ಸಲ್ಲಿಕೆ ಇಲ್ಲವೇ ಪೊಲೀಸ್ ಠಾಣೆಗೆ ತಕ್ಷಣ ಸಂಪರ್ಕ ಸೇರಿದಂತೆ ವಿವಿಧ ಸೇವೆಗಳು ಲಭಿಸುತ್ತವೆ.
*24x7 ಸೇವೆಯ ಲಭ್ಯತೆ
ವಾಟ್ಸಾಪ್ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಸ್ವಯಂಚಾಲಿತ ಪ್ರತಿಕ್ರಿಯೆಗಳ ಮೂಲಕ ಸೇವೆ ಸಿಗಲಿದೆ. ಅದರಲ್ಲೂ ಇಂಗ್ಲಿಷ್, ಕನ್ನಡ, ಹಿಂದಿ ಹಾಗೂ ತೆಲುಗು ಬಳಕೆದಾರ ಸ್ನೇಹಿಯಾಗಿದೆ. ಇದರ ಬಳಕೆಯಿಂದ ಸಮಯದ ಉಳಿತಾಯವಾಗುತ್ತದೆ. ಮೂಲ ಸಂದೇಹಾತ್ಮಕ ಪ್ರಶ್ನೆಗಳಿಗಾಗಿ ಠಾಣೆಗೆ ಭೇಟಿ ನೀಡುವ ಅಗತ್ಯವಿಲ್ಲ. ಪಾರದರ್ಶಕ, ನಾಗರಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಸೇರಿದಂತೆ ಜನಸ್ನೇಹಿ ಸೇವೆಗೆ ಸಹಕಾರಿಯಾಗಿದೆ.
*ಬಳಕೆಯ ವಿಧಾನ
ಜಿಲ್ಲಾ ಪೊಲೀಸ್ ಇಲಾಖೆಯ ಮೊಬೈಲ್ ಸಂಖ್ಯೆ: 9480802538 ಅನ್ನು ಜನರು ಮೊಬೈಲ್ ಸೇವ್ ಮಾಡಿಕೊಂಡ ಬಳಿಕ, ವಾಟ್ಸಾಪ್ ಮೂಲಕ “ಹಾಯ್” ಎಂದು ಸಂದೇಶ ಕಳುಹಿಸಿದರೆ ಸಾಕು. ಹಾಗೆಯೇ ಸೇವೆಗಳನ್ನು ಪ್ರವೇಶಿಸಲು ಸುಲಭ ಮೆನುವನ್ನು ಅನುಸರಿಸಬೇಕು. ಪ್ರಶ್ನೆಯನ್ನು ನೇರವಾಗಿಯೂ ಕಳುಹಿಸಬಹುದಾಗಿದೆ.