

ನವದೆಹಲಿ: ಏಷ್ಯಾದ ಅತಿದೊಡ್ಡ ಬಿಲಿಯನೇರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ( Mukesh Ambani ) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ. ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಈ ಮದುವೆಯನ್ನು ತಿರುಗಿ ನೋಡಿತು.
ಈ ಮದುವೆಗೆ ಅಂಬಾನಿ ಕುಟುಂಬ 5000 ಕೋಟಿ ರೂ. ಖರ್ಚು ಮಾಡಿದೆ. ಈ ಹಣವು ಅವರ ಆಸ್ತಿ ಮೌಲ್ಯದ ಶೇ. 0.5 ರಷ್ಟು ಮಾತ್ರ ಎಂಬುದೇ ಅಚ್ಚರಿಯ ಸಂಗತಿ. ಇಷ್ಟೊಂದು ಸಂಪತ್ತು ಇದ್ದರೂ ಅಂಬಾನಿ ಕುಟುಂಬದವರು ಮಾತ್ರ ಸಾಮಾನ್ಯ ಜನರಂತೆ ಮೂಲ ಮತ್ತು ಸಾಂಪ್ರದಾಯಿಕ ಆಹಾರವನ್ನೇ ಸೇವಿಸುತ್ತಾರೆ. ಅಂಬಾನಿ ಕುಟುಂಬ ಸಸ್ಯಾಹಾರಿ ಆಹಾರವನ್ನು ಹೆಚ್ಚಾಗಿ ತಿನ್ನುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ.
ಅಂದಹಾಗೆ, ಮುಕೇಶ್ ಅಂಬಾನಿ ಅವರು ದಾಲ್, ರೊಟ್ಟಿ ಮತ್ತು ಅನ್ನದಂತಹ ಸರಳ ಆಹಾರಗಳನ್ನು ಇಷ್ಟಪಡುತ್ತಾರೆ. ಥಾಯ್ ಪಾಕಪದ್ಧತಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಅಂಬಾನಿ ಕುಟುಂಬದ ಬೆಳವಣಿಗೆಯಲ್ಲಿ ಆಹಾರವು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಊಟಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಅಂಬಾನಿ ಕುಟುಂಬ ಊಟಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡಬೇಕಾದರೆ, ಅಡುಗೆ ಮಾಡುವ ಬಾಣಸಿಗರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ? ಬಾಣಿಸಿಗರಿಗೆ ಸಿಗುವ ಸಂಬಳ ಎಷ್ಟು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರವನ್ನು ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಬಹುದು.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಐಷಾರಾಮಿ ಮನೆಯಾಗಿರುವ ಆಂಟಿಲಿಯಾದಲ್ಲಿ ಬಾಣಸಿಗರು 2 ಲಕ್ಷ ರೂ. ಮಾಸಿಕ ವೇತನವನ್ನು ಗಳಿಸುತ್ತಾರೆ. ವಾರ್ಷಿಕವಾಗಿ 24 ಲಕ್ಷ ರೂ. ಆದಾಯ ಗಳಿಸುತ್ತಾರೆ. ಇದು ಭಾರತದ ದೊಡ್ಡ ಕಂಪನಿಗಳ ಉನ್ನತ ಅಧಿಕಾರಿಗಳ ಸಂಬಳಕ್ಕಿಂತಲೂ ಹೆಚ್ಚಿದೆ. ಆರೋಗ್ಯಕ್ಕೆ ತುಂಬಾ ಪ್ರಾಮುಖ್ಯತೆ ನೀಡುವ ಅಂಬಾನಿ ಕುಟುಂಬ, ಸಸ್ಯಾಹಾರಿ ಖಾದ್ಯಗಳಾದ ದಾಲ್, ಅನ್ನ, ಚಪಾತಿ, ಸಬ್ಜಿ ಹಾಗೂ ಇಡ್ಲಿ-ಸಾಂಬಾರ್ ಜೊತೆಗೆ ಒಂದು ಲೋಟ ಪಪ್ಪಾಯಿ ಜ್ಯೂಸ್, ಪಪ್ಪಡಿ ಚಾಟ್ ಮತ್ತು ಗುಜರಾತಿ ಭಕ್ಷ್ಯಗಳನ್ನು ಇಷ್ಟಪಡುತ್ತದೆ.
ಇನ್ನೂ ಆಂಟಿಲಿಯಾದಲ್ಲಿ ಅಡುಗೆಯವನಷ್ಟೇ ಅಲ್ಲ ಚಾಲಕನಿಗೂ 2 ಲಕ್ಷ ರೂ. ಸಂಬಳ ಸಿಗುತ್ತಿದೆ ಎನ್ನಲಾಗಿದೆ. ಆಂಟಿಲಿಯಾದಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳು ಇದೇ ರೀತಿಯ ದೊಡ್ಡ ಮೊತ್ತವನ್ನು ಸಂಬಳವಾಗಿ ಪಡೆಯುತ್ತಾರೆ ಎಂದು ವರದಿಗಳು ಸೂಚಿಸುತ್ತವೆ. ಈ ಭವ್ಯ ಬಂಗಲೆಯನ್ನು ನಿರ್ವಹಣೆ ಮಾಡಲು ಸುಮಾರು 600 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಉದ್ಯೋಗಿಗಳು ಈ 27-ಅಂತಸ್ತಿನ ವಸತಿ ಕಟ್ಟಡದ ಉನ್ನತ ಗುಣಮಟ್ಟವನ್ನು ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಕಟ್ಟಡ ಎನ್ನಲಾಗಿದೆ. (ಏಜೆನ್ಸೀಸ್)