ನಿಮ್ಮ ಆಧಾರ್​ ಸಂಖ್ಯೆಯಲ್ಲಿ ಎಷ್ಟು ಸಿಮ್​ ಕಾರ್ಡ್​ ಬಳಕೆಯಲ್ಲಿದೆ ಗೊತ್ತಿದ್ಯಾ? ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಮಾಹಿತಿ | SIM Card

ವಿಜಯವಾಣಿ - 2025-06-24T163256.865
Published on

SIM Card: ನಮ್ಮದೊಂದು ಆಧಾರ್ ಸಂಖ್ಯೆಯಲ್ಲಿ ಅಬ್ಬಬ್ಬಾ ಎಂದರೆ ನಾವು ಒಂದು ಅಥವಾ ಎರಡು ಸಿಮ್ ಕಾರ್ಡ್ ಖರೀದಿ ಮಾಡಿ, ಉಪಯೋಗಿಸುತ್ತಿರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಆನ್​ಲೈನ್ ವಂಚನೆ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಮ್ಮ ಹೆಸರಿನಲ್ಲಿ ಕಿಡಿಗೇಡಿಗಳು ಸಿಮ್ ಕಾರ್ಡ್​ ಖರೀದಿಸಿ ಬಳಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ತಿಳಿಯುವುದು ಹೇಗೆ? ನಮ್ಮ ಆಧಾರ್​ನಲ್ಲಿ ಎಷ್ಟು ಸಿಮ್​ ಕಾರ್ಡ್​ಗಳು ಚಾಲ್ತಿಯಲ್ಲಿವೆ ಎಂಬುದನ್ನು ಪತ್ತೆಹಚ್ಚುವುದು ಈಗ ಬಹಳ ಸುಲಭ. ಅದು ಹೇಗೆ ಅಂತೀರಾ? ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ.

ಪ್ರಸ್ತುತ ಕಾಲಘಟ್ಟದಲ್ಲಿ ನಿಮ್ಮ ಅರಿವಿಗೆ ಬಾರದಂತೆ ಯಾರು ಬೇಕಾದರೂ ನಿಮ್ಮ ಯುಐಡಿ ಸಂಖ್ಯೆಯನ್ನು ಬಳಸುವ ಸಾಧ್ಯತೆಗಳಿವೆ. ದೂರಸಂಪರ್ಕ ಇಲಾಖೆ (ಡಿಒಟಿ) TAFCOP ವ್ಯವಸ್ಥೆಯ ಅಡಿಯಲ್ಲಿ ಸಂಚಾರ್ ಸಾಥಿ ಆನ್​ಲೈನ್​ ಪೋರ್ಟಲ್ ಮೂಲಕ ಒಂದು ಸಾಧನವನ್ನು ಲಭ್ಯವಾಗುವಂತೆ ಮಾಡಿದೆ. ಇದರ ಸಹಾಯದಿಂದ ನೀವು ಕುಳಿತ ಜಾಗದಿಂದಲೇ ನಿಮ್ಮ ಸ್ಮಾರ್ಟ್​ಫೋನ್ ಅಥವಾ ಲಾಪ್​ಟಾಪ್​/ ಕಂಪ್ಯೂಟರ್​ನಲ್ಲಿ ಪ್ರಸ್ತುತ ಆಧಾರ್ ಕಾರ್ಡ್​ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ತಿಳಿಯಬಹುದಾಗಿದೆ.

ಈ ಮೂಲಕ ಬಳಕೆದಾರರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ಭಾರತ ಸರ್ಕಾರವು ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ದೇಶಾದ್ಯಂತ 9 ಸಕ್ರಿಯ ಸಿಮ್‌ಗಳೊಂದಿಗೆ ಒಂದು ಆಧಾರ್ ಅನ್ನು ನೋಂದಾಯಿಸಬಹುದು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಗರಿಷ್ಠವೇ 6. ನಿಮ್ಮ ಮೊಬೈಲ್ ಸಂಖ್ಯೆಗೆ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ತಿಳಿಯಲು ಕೆಳಗೆ ನೀಡಲಾದ ಕ್ರಮಗಳನ್ನು ಅನುಸರಿಸಿ.

  • ಸಂಚಾರ್ ಸಾಥಿ ಪೋರ್ಟಲ್‌ಗೆ ಕ್ಲಿಕ್​ ಮಾಡಿ ( sancharsaathi.gov.in ).
  • ಮುಖಪುಟದಲ್ಲಿ, Citizen Centric Services ವಿಭಾಗಕ್ಕೆ ಹೋಗಿ 'Know Your Mobile Connections' ಮೇಲೆ ಟ್ಯಾಪ್ ಮಾಡಿ.
  • ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒನ್​ ಟೈಮ್​ ಪಾಸ್‌ವರ್ಡ್ (OTP) ಅನ್ನು ಕೊಡಲಾದ ಬಾಕ್ಸ್​ನಲ್ಲಿ ನಮೂದಿಸಿ.
  • ಅದಾದ ಬಳಿಕ, ಆಧಾರ್ ಐಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಪರದೆಯ ಮೇಲೆ ಗೋಚರಿಸುತ್ತದೆ.

ಗೊತ್ತಿಲ್ಲದ ಮೊಬೈಲ್ ಸಂಖ್ಯೆಗಳನ್ನು ಕಿತ್ತುಬಿಸಾಡುವುದು ಹೇಗೆ?

ನಿಮಗೆ ಸಂಬಂಧಿಸದ ಮೊಬೈಲ್​ ಸಂಖ್ಯೆ ಗೋಚರಿಸಿದ್ದರೆ, ಅದನ್ನು ಸಂಪರ್ಕ ಕಡಿತಗೊಳಿಸಿ. ಇದು "ನನ್ನ ಸಂಖ್ಯೆಯಲ್ಲ" ಎಂದು ಫ್ಲ್ಯಾಗ್ ಮಾಡಬಹುದು ಅಥವಾ ನೀವು ಹಳೆಯ ಸಿಮ್ ಹೊಂದಿದ್ದರೆ, ನೀವು ಅದನ್ನು "ಅಗತ್ಯವಿಲ್ಲ" ಎಂದು ಫ್ಲ್ಯಾಗ್ ಮಾಡುವ ಆಯ್ಕೆ ಕ್ಲಿಕ್​ ಮಾಡಿ. ನಿಮ್ಮ ವರದಿಯ ಆಧಾರದ ಮೇಲೆ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಹೆಸರಿನಲ್ಲಿ 9ಕ್ಕಿಂತ ಅಧಿಕ ಸಿಮ್ ಕಾರ್ಡ್‌ ನೋಂದಣಿ ಆಗಿದ್ದಲ್ಲಿ, ಕೂಡಲೇ ಸಂದೇಶದ (SMS) ಮೂಲಕ ಎಚ್ಚರಿಕೆ ಗಂಟೆ ನಿಮ್ಮನ್ನು ತಲುಪಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net