

ಅಮೆರಿಕ: ಖ್ಯಾತ ಅಮೆರಿಕನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಡಿಸೈನ್ ಮಾಡಿರುವ ಈ ಚಿನ್ನದ ಶೌಚಾಲಯ (Gold Toilet) ಶೀಘ್ರದಲ್ಲೇ ಹರಾಜು ಪ್ರಕ್ರಿಯೆಗೆ ಬರಲಿದೆ. ಇದು ವಿಶ್ವದ ಅತ್ಯಂತ ಬೆಲೆಬಾಳುವ ಹಾಗೂ ದುಬಾರಿ ಮೌಲ್ಯದ ಶೌಚಾಲಯ ಎನ್ನಲಾಗಿದೆ. ಅಷ್ಟಕ್ಕೂ ಏನಿದರ ವಿಶೇಷತೆ? ಹರಾಜು ನಡೆಯುವುದು ಎಲ್ಲಿ ಎಂಬುದರ ವಿವರ ಹೀಗಿದೆ ನೋಡಿ.
ಮೌರಿಜಿಯೊ ಕ್ಯಾಟೆಲನ್ ವಿನ್ಯಾಸಗೊಳಿಸಿರುವ ಎರಡನೇ ಚಿನ್ನದ ಶೌಚಾಲಯ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ. ಈ ಮೊದಲು ಚಿನ್ನದ ಕಮೋಡ್ ಅನ್ನು ಸುಮಾರು 101.2 ಕೆಜಿಯಷ್ಟು 18 ಕ್ಯಾರೆಟ್ ಚಿನ್ನದಿಂದ ರೂಪಿಸಲಾಗಿತ್ತು. ಇದು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಟಾಯ್ಲೆಟ್ ಆಗಿದೆ. ಅಸಲಿಗೆ ಇದರ ಬೆಲೆ ಸುಮಾರು 10 ಮಿಲಿಯನ್ ಡಾಲರ್ (ಅಂದರೆ ಸುಮಾರು 83 ಕೋಟಿ ರೂ.) ಎಂದು ಹೇಳಲಾಗಿದೆ. ಇದೇ ನವೆಂಬರ್ ತಿಂಗಳ 18ರಂದು ನ್ಯೂಯಾರ್ಕ್ನ ಸೋಥೆಬಿಸ್ ಈ ಹರಾಜನ್ನು ನಡೆಸಲಿದೆ.
ಕ್ಯಾಟೆಲನ್ 2016ರಲ್ಲಿ ಇದೇ ರೀತಿಯ ಎರಡು ಗೋಲ್ಡನ್ ಟಾಯ್ಲೆಟ್ ಮಾಡಿದ್ದರು. ಅವುಗಳಲ್ಲಿ ಒಂದನ್ನು 2019ರಲ್ಲಿ ಇಂಗ್ಲೆಂಡ್‌ನ ಬ್ಲೆನ್‌ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಕಳ್ಳರು ಆ ಬೆಲೆ ಬಾಳುವ ವಸ್ತುವನ್ನು ಪ್ಲಂಬಿಂಗ್ ಮೂಲಕ ಕಳ್ಳತನ ಮಾಡಿದರು. ಇಲ್ಲಿಯವರೆಗೆ ಆ ಶೌಚಾಲಯ ಕದ್ದವರು ಯಾರು? ಅದು ಎಲ್ಲಿದೆ ಎಂಬ ಸುಳಿವು ಇನ್ನೂ ಪತ್ತೆಯಾಗಿಲ್ಲ. ಕಳ್ಳರು ಅದನ್ನು ಕರಗಿಸಿಬಿಟ್ಟಿದ್ದಾರೆ ಎಂದು ಪೊಲೀಸರು ನಂಬಿದ್ದಾರೆ.
ಈ ಚಿನ್ನದ ಕಮೋಡ್ ಅನ್ನು ನವೆಂಬರ್ 8ರಿಂದ ಹರಾಜು ಪ್ರಕ್ರಿಯೆ ಮುಗಿಯುವವರೆಗೂ ಸೋಥೆಬಿಯ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುವುದು. ಸಂದರ್ಶಕರು ಅದನ್ನು ಹತ್ತಿರದಿಂದ ನೋಡಬಹುದಾಗಿದೆ. ಮುಟ್ಟಲು ಅಥವಾ ಹಿಂದಿನಂತೆ ಫ್ಲಶ್ ಮಾಡಲು ಯತ್ನಿಸಲು ಅನುಮತಿ ಇಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ,(ಏಜೆನ್ಸೀಸ್).