

ಭದ್ರಾವತಿ: ಚುಂಚಾದ್ರಿ ಮಹಿಳಾ ವೇದಿಕೆಯಿಂದ ಭದ್ರಾ ನದಿ ಪಾತ್ರದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ವಿಶ್ವ ನದಿ ದಿನ ಆಚರಿಸಲಾಯಿತು. ನದಿ ಸುತ್ತಮುತ್ತ, ಸೇತುವೆ ಮೇಲ್ಭಾಗದ ಪ್ರದೇಶವನ್ನು ಚುಂಚಾದ್ರಿ ವೇದಿಕೆ ಮಹಿಳೆಯರು ಸ್ವಚ್ಛಗೊಳಿಸಿದರು.
ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಸ್.ಸುಧಾಮಣಿ ಮಾತನಾಡಿ, ಮಾಂಸದ ತ್ಯಾಜ್ಯ ಸೇರಿ ಕೆಲ ಅನುಪಯುಕ್ತ ವಸ್ತುಗಳನ್ನು ನದಿಗೆ ಹಾಕುತ್ತಿರುವುದರಿಂದ ನೀರು ಕಲುಷಿತವಾಗುತ್ತದೆ. ಸುತ್ತಮುತ್ತಲ ಪರಿಸರ ಕೂಡ ಸ್ವಚ್ಛತೆ ಇಲ್ಲದೆ ಹಾಳಾಗುತ್ತಿದೆ. ತ್ಯಾಜ್ಯವನ್ನು ನದಿಗೆ ಸಾರ್ವಜನಿಕರು ಹಾಕಬಾರದು ಎಂದು ಮನವಿ ಮಾಡಿದರು.
ನಗರಸಭೆ ಆರೋಗ್ಯ ಆಧಿಕಾರಿ ಆಶಾಲತಾ ಮಾತನಾಡಿ, ಸ್ವಚ್ಛ ನಗರ ನಿರ್ಮಿಸುವಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದರು. ವೇದಿಕೆ ಉಪಾಧ್ಯಕ್ಷೆ ಸುಮಾ, ಖಜಾಂಚಿ ಭಾರತಿ, ಪ್ರತಿಭಾ, ಸಹ ಕಾರ್ಯದರ್ಶಿ ಶೀಲಾ, ಆರೋಗ್ಯ ಅಧಿಕಾರಿ ನಿತಿನ್ ಇತರರಿದ್ದರು.