ಜಲಮೂಲ ನಿರ್ವಹಣೆಯಲ್ಲಿ ಲೋಪವಾಗದಿರಲಿ

srb kere
ಸೊರಬ ತಾಲೂಕಿನ ಹರಳಿಕೊಪ್ಪ ಗ್ರಾಮದಲ್ಲಿ ಅಭಿವೃದ್ಧಿಪಡಿಸಿದ ಕೆರೆಗೆ ಜಡೆ ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯರು ಬಾಗಿನ ಅರ್ಪಿಸಿದರು. ದುಗ್ಗೇಗೌಡ, ಎ.ಬಾಬು ನಾಯ್ಕ, ಎಸ್.ಎಚ್.ದಿನೇಶ್, ರಾಜು ಗೌಡ, ಪಿಡಿಒ ಡಿ.ಬಿ.ರಾಜಪ್ಪ, ಜಯಂತಿ ಇತರರಿದ್ದರು.
Published on

ಸೊರಬ: ಕಲಿಯುಗದಲ್ಲಿ ನೀರು ಅಮೃತಕ್ಕೆ ಸಮಾನ. ಅದರ ರಕ್ಷಣೆ ಮತ್ತು ಸದ್ಬಳಕೆ ಹೆಚ್ಚಿನ ಮಹತ್ವ ಪಡದಿದೆ ಎಂದು ಜಡೆ ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹರಳಿಕೊಪ್ಪ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕರೆ ಕಾರ್ಯಕ್ರಮದಡಿ ಹೂಳೆತ್ತಲಾದ ಊರ ಮುಂದಿನ ಕೆರೆಗೆ ಬಾಗಿನ ಅರ್ಪಣೆ ಮತ್ತು ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಯೋಜನೆಯಿಂದ ಕೆರೆ ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ಕೆರೆ ಮಲಿನವಾಗದಂತೆ ನಿರ್ವಹಣೆ ಮಾಡುವುದು ಗ್ರಾಮಸ್ಥರ ಜವಾಬ್ದಾರಿ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ಹರಳಿಕೊಪ್ಪ ಗ್ರಾಮಸ್ಥರ ಸಹಕಾರದಿಂದ 9 ಎಕರೆ ಕೆರೆಯನ್ನು ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಿರುವುದು ಸಂತಸ ತಂದಿದೆ. ಇದರಿಂದ ಜಾನುವಾರುಗಳಿಗೆ ಅನುಕೂಲವಾಗುವ ಜತೆಗೆ ಬೋರ್‌ವೆಲ್‌ಗಳ ಜಲ ಮರುಪೂರಣಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಮಾತನಾಡಿ, ಕೆರೆ ಅಭಿವೃದ್ಧಿಗೆ ಧರ್ಮಸ್ಥಳದಿಂದ 13 ಲಕ್ಷ ರೂ. ಅನುದಾನ ಬಂದಿದ್ದು, ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಗ್ರಾಮಸ್ಥರ ಸಹಾಯದಿಂದ ಪ್ರತಿದಿನ 3 ಹಿಟಾಚಿಗಳ ಮೂಲಕ ಒಟ್ಟು 21 ಸಾವಿರ ಟ್ರಾೃಕ್ಟರ್ ಲೋಡ್ ಮಣ್ಣನ್ನು ಹೊರತೆಗೆಯಲಾಗಿದೆ. ವಿವಿಧ ಹಣ್ಣಿನ ಗಿಡಗಳನ್ನು ಕೆರೆ ಏರಿ ಮೇಲೆ ನೆಟ್ಟು ಭದ್ರತೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಮಣ್ಣು ಸಾಗಣೆಗಾಗಿ 8.50 ಲಕ್ಷ ರೂ. ಖರ್ಚು ಮಾಡಿದ್ದಾರೆ. ನೀರಿನ ಮಹತ್ವ ಅರಿತುಕೊಂಡು ಸಾರ್ವಜನಿಕರು ಕೆರೆಯನ್ನು ರಕ್ಷಿಸಿಕೊಳ್ಳಬೇಕೆಂದು ಎಂದರು.
ಗ್ರಾಪಂ ಅಧ್ಯಕ್ಷ ಎಸ್.ಎಚ್.ದಿನೇಶ್, ಕೆರೆ ಸಮಿತಿ ಅಧ್ಯಕ್ಷ ರಾಜು ಗೌಡ, ಪಿಡಿಒ ಡಿ.ಬಿ.ರಾಜಪ್ಪ, ಸದಸ್ಯ ಸಿದ್ದಲಿಂಗೇಶ್ ಗೌಡ, ಯೋಜನಾಧಿಕಾರಿ ಜಯಂತಿ, ಮೇಲ್ವಿಚಾರಕ ಪ್ರವೀಣ್, ಕೃಷಿ ಮೇಲ್ವಿಚಾರಕ ಎಂ.ಜಟ್ಟ, ಪ್ರಶಾಂತ್, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net