

ಶಿಕಾರಿಪುರ: ನಗರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಸಾಂಕ್ರಾಮಿಕ ರೋಗಗಳು, ಅದರಲ್ಲೂ ಡೆಂೆ ಪ್ರಕರಣಗಳು ಹೆಚ್ಚಾಗುವ ಭೀತಿ ಇದೆ. ಕೂಡಲೇ ಸ್ವಚ್ಛತೆ ಕಡೆ ಗಮನ ಕೊಡಬೇಕು ಎಂದು ಪುರಸಭೆ ಸರ್ವ ಸದಸ್ಯರು ಒತ್ತಾಯಿಸಿದರು.
ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಎಸ್.ಪಿ.ನಾಗರಾಜ್ ಗೌಡ, ಆರೋಗ್ಯದ ಕಡೆಗೆ ನಾವು ಹೆಚ್ಚಿನ ಗಮನ ಹರಿಸಬೇಕು. ಸಾಂಕ್ರಾಮಿಕ ರೋಗ ತಡೆಗಟ್ಟಲು ಪುರಸಭೆ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಜೀನಳ್ಳಿ ಪ್ರಶಾಂತ್ ಹಾಗೂ ಭದ್ರಾಪುರದ ಪಾಲಾಕ್ಷಪ್ಪ ಮಾತನಾಡಿ, ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಅಪೂರ್ಣವಾಗಿದೆ. ಸರಾಗವಾಗಿ ನೀರು ಹರಿಯದೆ ಯುಜಿಡಿ ಪಿಟ್‌ಗಳಲ್ಲಿ ನೀರು ಉಕ್ಕುತ್ತಿದೆ. ಇದರಿಂದ ನಾಗರಿಕರಿಗೆ ಮುಜುಗರ ಹಾಗೂ ಸೋಂಕು ಹರಡುವ ಭಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಭರತ್ ಪ್ರತಿಕ್ರಿಯಿಸಿ, ಪಟ್ಟಣದಲ್ಲಿ ತುಂಬ ಸಮಸ್ಯೆಗಳಿವೆ. ಪರಿಹಾರಕ್ಕಾಗಿ ಹೆಚ್ಚುವರಿಯಾಗಿ 30 ಕೋಟಿ ರೂ. ಅನುದಾನ ಬಂದಿದೆ. ಸಮಸ್ಯೆಗಳ ನಿವಾರಣೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸದಸ್ಯ ರೋಷನ್ ಮಾತನಾಡಿ, ಪಟ್ಟಣದ ಸ್ವತಂತ್ರ ಪದವಿಪೂರ್ವ, ಐಟಿಐ ಕಾಲೇಜುಗಳು ನಿರ್ಮಾಣವಾದಾಗ ನಮ್ಮ ಮನೆ ತೆರವುಗೊಳಿಸಿ ವಿದ್ಯಾಸಂಸ್ಥೆಗೆ ರಸ್ತೆ ಮಾಡಿಕೊಡಲಾಗಿತ್ತು. ಇದಕ್ಕೆ ಪರಿಹಾರವಾಗಿ ಇದುವರೆಗೂ ನಮಗೆ ಯಾವುದೇ ಹಕ್ಕುಪತ್ರ ನೀಡಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, 90 ದಿನಗಳ ಒಳಗಾಗಿ ಹಕ್ಕುಪತ್ರ ಕೊಡಿಸುವುದಾಗಿ ಭರವಸೆ ನೀಡಿದರು.
ಎಪಿಎಂಸಿಯಲ್ಲಿ ನಿರ್ಮಾಣವಾಗಿರುವ ಗೋದಾಮುಗಳನ್ನು ಪುರಸಭೆ ವ್ಯಾಪ್ತಿಗೆ ತಂದು ಖಾತೆ ಮಾಡಿಸಿಕೊಳ್ಳಲು ಎಪಿಎಂಸಿ ಕಾರ್ಯದರ್ಶಿ ಮನವಿ ಮಾಡಿದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಉಳ್ಳಿ ದರ್ಶನ್, ಯಾವುದೇ ಲೇಔಟ್ ಮಾಡುವಾಗ ಟೌನ್ ಪ್ಲಾನಿಂಗ್‌ನಿಂದ ಅನುಮೋದನೆಗೊಂಡ ನಕ್ಷೆ ಇಲ್ಲದೆ ಯಾವುದೇ ಖಾತೆ ಮಾಡಲು ಸಾಧ್ಯವಿಲ್ಲ. ಆದರೆ ಇದನ್ನು ಹೇಗೆ ಖಾತೆ ಮಾಡುತ್ತೀರಿ ಪ್ರಶ್ನಿಸಿದರು. ಪ್ರತಿಕ್ರಿಯೆ ವ್ಯಕ್ತಪಡಿಸಿದ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ಕೈಗೊಂಡು ಸಭೆಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ರೂಪಾ ಮಂಜುನಾಥ್, ರೂಪಕಲಾ ಹೆಗಡೆ, ಲಕ್ಷ್ಮೀ ಮಹಾಲಿಂಗಪ್ಪ, ರೇಖಾ ಬಾಯಿ, ಸುನಂದಾ ಮಂಜುನಾಥ, ಫೈರೋಜಾ ಬಾನು, ರೇಣುಕಸ್ವಾಮಿ, ಶ್ವೇತಾ, ಜಯಶ್ರೀ, ಶಕುಂತಲಮ್ಮ ಗೋಣಿ, ಸುರೇಶ್, ರಮೇಶ್ ಗುಂಡ, ಕಂದಾಯ ಅಧಿಕಾರಿ ಪರಶುರಾಮ್, ಎಸ್‌ಜೆಎಸ್‌ಆರ್‌ವೈ ಸುರೇಶ್, ವ್ಯವಸ್ಥಾಪಕ ರಾಜಕುಮಾರ್ ಇತರರಿದ್ದರು.