

ಬೆಂಗಳೂರು: ಇನ್ನು ಮುಂದೆ ಶಿಕ್ಷಕರ ನೇಮಕ ಮಾಡುವ ಸಂದರ್ಭದಲ್ಲಿ ಪದವಿಯಲ್ಲಿ ಹಿಂದಿ ಐಚ್ಛಿಕ ಭಾಷೆಯಾಗಿ ಅಧ್ಯಯನ ಮಾಡಿದವರನ್ನು ಪರಿಗಣನೆ ಮಾಡುವುದರ ಜತೆಗೆ ಹಿಂದಿ ಪ್ರಚಾರ ಸಮಿತಿಗಳ ಮೂಲಕ ಅಭ್ಯಾಸ ಮಾಡಿರುವವರನ್ನು ಸಹ ಪರಿಗಣಿಸಬೇಕೆಂದು ರಾಜ್ಯ ಹಿಂದಿ ಭಾಷಾ ನಿರುದ್ಯೋಗಿ ಶಿಕ್ಷಕರ ಸಂಘ ಆಗ್ರಹಿಸಿದೆ.
ಇತ್ತೀಚಿಗೆ ಮುರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ನೇಮಕಾತಿಯಲ್ಲಿ ಹಿಂದಿ ಪ್ರಚಾರ ಸಮಿತಿಯ ಮೂಲಕ ಹಿಂದಿ ಭಾಷಾ ಪ್ರವೀಣ್, ಹಿಂದು ರತ್ನ, ಪ್ರಕಾಶ್, ಬಿದ್ವಾನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ಹಿಂದಿ ಭಾಷಾ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ. ಆದರೆ, ಶಿಕ್ಷಣ ಇಲಾಖೆ ಮಾತ್ರ ಪದವಿಯಲ್ಲಿ ಐಚ್ಛಿಕವಾಗಿ ಹಿಂದಿ ಭಾಷೆಯಲ್ಲಿ ವ್ಯಾಸಂಗ ಮಾಡಿರುವವರು ಮಾತ್ರ ಹಿಂದಿ ಭಾಷಾ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಶಿಕ್ಷಣ ಇಲಾಖೆ ನಿಯಮ ರೂಪಿಸಿದೆ. ಇದರಿಂದ ಸಾವಿರಾರು ಹಿಂದಿ ಭಾಷೆ ವ್ಯಾಸಂಗ ಮಾಡಿರುವವರಿಗೆ ಅನ್ಯಾಯವಾಗಿದೆ.
ಇಡೀ ರಾಜ್ಯದಲ್ಲಿ ಕೇವಲ 5 ಜಿಲ್ಲೆಗಳಲ್ಲಿ ಮಾತ್ರ ಹಿಂದಿಯನ್ನು ಐಚ್ಛಿಕ ಭಾಷಾ ವಿಷಯವಾಗಿ ಬೋಧನೆ ಮಾಡುತ್ತಿವೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಈ ಕೋರ್ಸ್‌ಗಳಿಲ್ಲ. ಅಂತಹವರು ಹಿಂದಿ ಭಾಷಾ ಶಿಕ್ಷಕರಾಗುವ ಉದ್ದೇಶದಿಂದ ಹಿಂದಿ ಪ್ರಚಾರ ಸಮಿತಿಯ ಮೂಲಕ ವ್ಯಾಸಂಗ ಮಾಡಿವೆ. ಇದನ್ನು ಪರಿಗಣಿಸದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ. ಶಿಕ್ಷಣ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯ ಒದಗಿಸಬೇಕೆಂದು ರಾಜ್ಯಾಧ್ಯಕ್ಷ ಎಚ್. ಶಿವಣ್ಣ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.