

ಬೆಂಗಳೂರು: ಬಿಜೆಪಿ- ಜೆಡಿಎಸ್ ಮೈತ್ರಿಗೆ ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರ ದಿನದಿನಕ್ಕೂ ಕಗ್ಗಂಟಾಗುತ್ತಿದ್ದು, ಈ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿಯಾಗಿ ತಮಗೆ ಸ್ಪರ್ಧಿಸಲು ಅವಕಾಶ ಕೊಡಬೇಕೆಂಬುದು ಅವರ ವಾದ. ಇದೇ ಅಂಶವನ್ನು ಬಿಜೆಪಿ ದೆಹಲಿ ನಾಯಕರ ಮುಂದೆ ಮಂಡಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಬಿಜೆಪಿ ಬೆಂಬಲಕ್ಕೆ ನಿಲ್ಲದೇ ಹೋದರೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದೂ ತಮ್ಮ ನಿಲುವನ್ನು ಸಹ ತಿಳಿಸಿ ಬರಲಿದ್ದಾರೆ.
ಸೋಮವಾರ ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಪಕ್ಷೇತರನಾಗಿ ಮತ್ತೆ ಗೆದ್ದು ಎನ್‌ಡಿಎ ಭಾಗವಾಗುತ್ತೇನೆ. ಏನೇನು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಮುಂದೆ ನೋಡೋಣ ಎಂದು ಹೇಳಿದರು.
ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ. ಯಾವುದೇ ಚಿನ್ಹೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ. ಯಾರೂ ನನ್ನನ್ನು ಮಾತನಾಡಿಸಲಿಲ್ಲ. ಡಿ.ಕೆ.ಶಿವಕುಮಾರ್ ಏನೇನೋ ಮಾತನಾಡುತ್ತಾರೆ. ಅದು ಅವರ ರಾಜಕೀಯ ತಂತ್ರಗಾರಿಕೆ ಎಂದ ಅವರ ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿದೆ ಎಂದು ಹೇಳಿದರು.
ನನಗೂ ಕುಮಾರಸ್ವಾಮಿಯವರಿಗೂ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ ಎಂದ ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ವಿಚಾರವಾಗಿ ಕುಮಾರಸ್ವಾಮಿಯವರು ಮನಸ್ಸು ಬದಲಾಯಿಸಬಹುದು. ಕುಮಾರಸ್ವಾಮಿ ಒಪ್ಪದಿದ್ದರೆ ಮುಂದಿನ ದಾರಿ ನೋಡೋಣ ಎಂದು ತಿಳಿಸಿದರು.