ದುಶ್ಚಟಗಳಿಗೆ ಬಲಿಯಾಗಬೇಡಿ; ಮಕ್ಕಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

ತುಮಕೂರಿನ ಎನ್‌ಸಿಒಆರ್‌ಡಿ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿದರು. ರಾಹುಲ್‌ಕುಮಾರ್ ಶಹಾಪೂರವಾಡ್, ಮರಿಸ್ವಾಮಿ ಇದ್ದರು.
ತುಮಕೂರಿನ ಎನ್‌ಸಿಒಆರ್‌ಡಿ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿದರು. ರಾಹುಲ್‌ಕುಮಾರ್ ಶಹಾಪೂರವಾಡ್, ಮರಿಸ್ವಾಮಿ ಇದ್ದರು.
Published on

ತುಮಕೂರು: ಮಾದಕ ವಸ್ತು, ಡ್ರಗ್ಸ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಎನ್‌ಸಿಒಆರ್‌ಡಿ (ನ್ಯಾಷನಲ್ ನಾರ್ಕೋಟಿಕ್ಸ್ ಕೋ-ಆರ್ಡಿನೇಷನ್ ಪೋರ್ಟಲ್) ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಕ್ಕಳು ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕು. ಸಮಿತಿಯನ್ನು ಮತ್ತಷ್ಟು ಬಲಪಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು, ವಿಶ್ವವಿದ್ಯಾಲಯದ ನಿಬಂಧಕರು ಹಾಗೂ ಡೀನ್‌ಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿಕೊಳ್ಳುವಂತೆ ಸೂಚನೆ ನೀಡಿದರು.

ಗಾಂಜಾ ಬೆಳೆಯುವುದು ಕಾನೂನು ಬಾಹಿರ. ಈ ನಿಟ್ಟಿನಲ್ಲಿ ಗಾಂಜಾ ಬೆಳೆಯನ್ನು ಬೆಳೆಯಬಾರದು. ರೈತರಲ್ಲಿ ಅರಿವು ಮೂಡಿಸಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ತಂಬಾಕು ಸೇವನೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಾಗಾರವನ್ನು ನಡೆಸಲಾಗುತ್ತಿದ್ದು, ಇನ್ನು ಮುಂದೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಕಾನೂನಿನ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಹೇಳಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಣ ಸಂಸ್ಥೆ ವಸತಿ ನಿಲಯಗಳಲ್ಲಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳನ್ನು ನಿಷೇಧಿಸಲು ಆಯಾ ಶಿಕ್ಷಣ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ವಸತಿ ನಿಲಯಗಳ ಪಾಲಕರು ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕು. ಅವರ ಕೋಣೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಮಾದಕ ವಸ್ತುಗಳ ಬಳಸುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

| ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ಶಾಲಾ ಕಾಲೇಜುಗಳಲ್ಲದೆ ಹೋಟೆಲ್ ಹಾಗೂ ಪಿಜಿಗಳಲ್ಲೂ ಮಾದಕ ವಸ್ತುಗಳ ಬಳಕೆ ಮಾಡುವ ದೂರುಗಳು ಕೇಳಿಬಂದಿವೆ. ಇನ್ನೂ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೆಡಿಕಲ್ ಸ್ಟೋರ್‌ಗಳಲ್ಲಿ ದೊರೆಯುವ ಔಷಧಗಳನ್ನು ಮಾದಕ ವಸ್ತುಗಳಾಗಿ ಉಪಯೋಗಿಸುವ ವ್ಯಸನಿಗಳಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ನೀಡದಂತೆ ಕ್ರಮವಹಿಸಬೇಕು. | ರಾಹುಲ್ ಕುಮಾರ್ ಶಹಾಪೂರವಾಡ್ ಜಿಲ್ಲಾ ಪೊಲೀಸ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net