ಹುಲಿ ಸೆರೆಗೆ ಉದಾಸೀನ ಬೇಡ

Published on

ಗುಂಡ್ಲುಪೇಟೆ: ಬೊಮ್ಮಲಾಪುರ ಗ್ರಾಮದಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆ ಕಾರ್ಯಾಚರಣೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅರಣ್ಯಾಧಿಕಾರಿಗಳ ನಡೆಗೆ ಸಾಮೂಹಿಕ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಕಿಡಿ ಕಾರಿದ್ದಾರೆ.

ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟ ಜಾಗದಲ್ಲೇ ಐದಾರು ದಿನದಿಂದ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಬಂಡೀಪುರ ಅರಣ್ಯಾಧಿಕಾರಿಗಳನ್ನು ಸಂಪರ್ಕಿಲು ಯತ್ನಿಸಿದರೂ ಸಾಧ್ಯವಾಗದ ಕಾರಣ ಪಿಎಸಿಸಿಎಫ್ ಪುಷ್ಕರ್ ಅವರಿಗೆ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಲಾಗಿದೆ. ಅರಣ್ಯ ಸಿಬ್ಬಂದಿ ಜತೆ ಜನರು ಜಗಳವಾಡುವುದರಿಂದ ಪೊಲೀಸ್ ಇಲ್ಲದೆ ನಾವು ಅಲ್ಲಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹುಲಿಯು 9 ಹಸುವನ್ನು ತಿಂದಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಎರಡು ವರ್ಷವಾದರೂ ಇನ್ನೂ ನೀವು ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಧಿಕ್ಕಾರ ಕೂಗಿದ್ದಾರೆ ಅಷ್ಟೇ. ಬೋನಿನಲ್ಲಿ ಕೂಡಿಹಾಕಿದ್ದ ಕರುವಿನ ರಕ್ತವನ್ನು ಕುಡಿದು ಹುಲಿ ಹೊರಗಡೆ ಹೊರಟುಹೋಗಿದೆ. ಈ ವೇಳೆ ಬೋನು ಲಾಕ್ ಆಗಿರಲಿಲ್ಲ. ಇದನ್ನು ನೋಡಲು ಸಿಬ್ಬಂದಿ ಒಳಗೆ ಹೋಗಿದ್ದಾರೆಯೇ ಹೊರತು ಗ್ರಾಮಸ್ಥರು ಅವರನ್ನು ಕೂಡಿ ಹಾಕಿಲ್ಲ. ಇಲಾಖೆಯವರು ಸರಿಯಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಬರೋದಿಲ್ಲ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಾನವ ಮತ್ತು ಪ್ರಾಣಿ ಸಂಘಷರ್ ಸಮಸ್ಯೆಯನ್ನು ಅರಣ್ಯ ಇಲಾಖೆಯವರು ಪ್ರಾಮಾಣಿಕವಾಗಿ ಮಾಡುತ್ತಿಲ್ಲ, ಜತೆಗೆ ಸರ್ಕಾರದಿಂದ ಸಂತ್ರಸ್ಥ ರೈತರಿಗೆ ಬೆಳೆ ಪರಿಹಾರವೂ ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲೆಯ ನಾಲ್ಕು ಶಾಸಕರು ಮತ್ತು ಸಂಸದರ ಗಮನಕ್ಕೆ ತಂದು ರೈತರು ಮತ್ತು ಅವರು ಬೆಳೆದ ಫಸಲು ಉಳಿಸಬೇಕು. ಹುಲಿ ಸೆರೆ ಬಗ್ಗೆ ಉದಾಸೀನ ಮಾಡಿ ಯಾವುದಾದರೂ ಪ್ರಾಣಹಾನಿ ಸಂಭವಿಸಿದರೆ ನೀವೇ ಹೊಣೆಗಾರರಾಗಬೇಕಾಗುತ್ತದೆ. ಮುಂದೆ ಹೋರಾಟದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net