ರೋಗಿ ದೇಹ ಪರಿಶೀಲಿಸುವ ಅವಕಾಶ ದುರ್ಬಳಕೆ ಬೇಡ : ಹೈಕೋರ್ಟ್ ಸಲಹೆ

highcourt
Published on

ಬೆಂಗಳೂರು: ವೈದ್ಯರಾದವರಿಗೆ ರೋಗಿಗಳ ದೇಹ ಪರಿಶೀಲಿಸಲು ಇರುವ ಅಧಿಕಾರ ಅತ್ಯಂತ ಪವಿತ್ರವಾದದ್ದು, ಅದನ್ನು ರೋಗ ಗುಣಪಡಿಸಲು ಮಾತ್ರವೇ ಬಳಸಬೇಕು ಎಂದಿರುವ ಹೈಕೋರ್ಟ್, ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯರ ವಿರುದ್ಧದ ಎಫ್‌ಐಆರ್ ರದ್ದು ಪಡಿಸಲು ನಿರಾಕರಿಸಿದೆ.

ತಮ್ಮ ವಿರುದ್ಧದ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮೂಲದ ಬೆಂಗಳೂರು ನಿವಾಸಿಯಾಗಿರು ಡಾ.ಎಸ್.ಚೇತನ್‌ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ವೈದ್ಯ ವೃತ್ತಿಯಲ್ಲಿರುವವರಿಗೆ ರೋಗಿಯ ದೇಹವನ್ನು ಪರಿಶೀಲನೆ ಮಾಡಲು ಅವಕಾಶವಿದೆ. ಅದೊಂದು ಅತ್ಯಂತ ಶ್ರೇಷ್ಟ ಕಾರ್ಯವೂ ಹೌದು, ಅದನ್ನು ರೋಗವನ್ನು ಗುಣಪಡಿಸುವ ಉದ್ದೇಶಕ್ಕೆ ಮಾತ್ರ ಬಳಸುವಂತಿರಬೇಕು. ದುರುದ್ದೇಶ ಪೂರ್ವಕವಾಗಿ ಬಳಕೆ ಮಾಡಿದಲ್ಲಿ ಅದು ಐಪಿಸಿ 354ಎ ಅಡಿ ಲೈಂಗಿಕ ಕಿರುಕುಳ ನೀಡಿದಂತಾಗಲಿದೆ ಎಂದು ಪೀಠ ತಿಳಿಸಿದೆ.

ಅಷ್ಟೆ ಅಲ್ಲದೆ ನ್ಯಾಯಪೀಠ, ವೈದ್ಯನಾದವನು ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ಸಂದರ್ಭಗಳಲ್ಲಿ ಮಾತ್ರ ತಮ್ಮಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದೆ. ರೋಗಿಯಾದವನ ಅಸಾಹಯಕತೆಯನ್ನು ವೈದ್ಯರು ಅಸ್ತ್ರವನ್ನಾಗಿ ಬಳಸಬಾರದು, ರೋಗಿಯು ವೈದ್ಯರ ಮೇಲಿನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಇಲ್ಲಿ ದೇಹ ಪರಿಶೀಲನೆ ನೆಪದಲ್ಲಿ ವೈದ್ಯನಾದವನು ಲೈಂಗಿಕ ಕಿರುಕುಳ ನೀಡುವುದಕ್ಕೆ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದೆ.

ಈ ರೀತಿಯ ಕೃತ್ಯ ಬೆಳಕಿಗೆ ಬಂದಲ್ಲಿ ವೈದ್ಯರು ಮತ್ತು ರೋಗಿಯ ನಡುವೆ ವಿಶ್ವಾಸದ ಸಂಬಂಧಗಳು ನಾಶವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮುಂದುವರಿದು, ವೈದ್ಯರಾದವರು ರೋಗಿಗಳನ್ನು ಪರಿಶೀಲಿಸುವ ವೇಳೆ ಲೈಂಗಿಕ ಮಿತಿಗಳ ಕುರಿತಂತೆ ಭಾರತೀಯ ವೈದ್ಯಕೀಯ ಮಂಡಳಿ ತನ್ನ ಜಾಲಾತಾಣದಲ್ಲಿ ವಿವರಿಸಲಾಗಿದೆ. ಅಂತಹ ಮಾರ್ಗ ಸೂಚಿಗಳ ಕುರಿತು ಭಾರತೀಯ ಮನೋವೈದ್ಯಕೀಯ ಸಂಸ್ಥೆಯ ಕಾರ್ಯಪಡೆ ಮಾರ್ಗಸೂಚಿಗಳನ್ನು ರೂಪಿಸಿದ್ದು, ಪ್ರಮುಖವಾಗ ಮಹಿಳಾ ರೋಗಿಯನ್ನು ದೈಹಿಕವಾಗಿ ಪುರುಷ ವೈದ್ಯರು ಪರೀಕ್ಷಿಸುವ ಸಂದರ್ಭದಲ್ಲಿ ಮಹಿಳಾ ವ್ಯಕ್ತಿ ಸ್ಥಳದಲ್ಲಿ ಉಪಸ್ಥಿತಿಯಲ್ಲಿರಬೇಕು.

ಮಾತ್ರವಲ್ಲದೆ, ವೈದ್ಯರು- ರೋಗಿಯ ಸಂಬಂಧವನ್ನು ವೈಯಕ್ತಿಕ, ಸಾಮಾಜಿಕ ವ್ಯವಹಾರ ಅಥವಾ ಲೈಂಗಿಕ ಲಾಭಕ್ಕೆ ಬಳಕೆ ಮಾಡುಕೊಳ್ಳುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ. ಆದರೆ, ಅರ್ಜಿದಾರ ಈ ಮಾರ್ಗಸೂಚಿಗಳನ್ನು ಉಲ್ಲಂದ್ದಾರೆ ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಹೀಗಾಗಿ ಪ್ರಕರಣದ ಕುರಿತು ಕನಿಷ್ಟ ತನಿಖೆ ನಡೆಯಬೇಕಾಗಿದೆ. ಅಲ್ಲದೆ, ಪ್ರಕರಣ ರದ್ದುಗೊಳಿಸುವಂತೆ ಕೋರಿರುವ ವೈದ್ಯರು ಕೇವಲ ವೈದ್ಯರಾಗಿರದೆ ಆರೋಪಿ ಸ್ಥಾನದಲ್ಲಿದ್ದಾರೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರ ವೈದ್ಯರಾರಾಗಿರುವ ಜೆ.ಪಿ ನಗರದ ಏಳನೇ ಹಂತದಲ್ಲಿ ಆರ್ಬ್‌ಸ್ಕೈ ಆಸ್ಪತ್ರೆಗೆ ಎದೆ ನೋವು ಇರುವ ಮಹಿಳೆಯೊಬ್ಬರು ಬಂದು ಪರೀಕ್ಷೆಗಾಗಿ ಬರುತ್ತಾರೆ. ಅವರನ್ನು ಪರಿಶೀಲಿಸಿದ ಅರ್ಜಿದಾರ ಚೇತನ್ ಅವರು ಇಸಿಜಿ ಮತ್ತು ಎಕ್ಸ್‌ರೇ ಪರೀಕ್ಷೆ ನಡೆಸುವಂತೆ ಸೂಚಿಸಿ ಆಕೆ ಮೊಬೈಲ್ ಸಂಖ್ಯೆಯನ್ನು ಪಡೆದು ವಾಟ್ಸ್‌ಪ್ ಮಾಡುವುದಾಗಿ ತಿಳಿಸಿರುತ್ತಾರೆ. ಬಳಿಕ ಎಲ್ಲ ದಾಖಲೆಗಳನ್ನು ವಾಟ್ಸ್‌ಪ್ ಮೂಲಕ ಕಳುಹಿಸಿ ತನ್ನ ಖಾಸಗಿ ಕ್ಲಿನಿಕ್‌ಗೆ ಬಂದು ಭೇಟಿಯಾಗುವಂತೆ ಸೂಚನೆ ನೀಡುತ್ತಾರೆ.

ಮಾ. 21 ರಂದು ಕ್ಲಿನಿಕ್‌ಗೆ ಒಬ್ಬರೇ ಬಂದಿದ್ದ ಮಹಿಳಾ ರೋಗಿಯನ್ನು ಕೊಠಡಿಗೆ ಕರೆದೊಯ್ದು ಮಲಗುವಂತೆ ಹೇಳಿ ಎದೆಯ ಮೇಲೆ ಸ್ಟೆಥಸ್ಕೋಪ್‌ನ್ನಿಟ್ಟು ಪರಿಶೀಲಿಸಿದರು. ಬಳಿಕ ಆಕೆಯ ಉಡುಪುಗಳನ್ನು ಮೇಲಕ್ಕೆ ಸರಿಸಿ ಲೈಂಗಿಕವಾಗಿ ಬಳಸಲು ಯತ್ನಿಸಿದ್ದು. ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ಕ್ಲಿನಿಕ್‌ನಿಂದ ಹೊರ ಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿ ಮರು ದಿನ ಅಂದರೆ ಮಾ.22ರಂದು ಲೈಂಗಿಕ ಕಿರುಕುಳದ ಆರೋಪದಲ್ಲಿ ದೂರು ದಾಖಲಿಸಿದ್ದರು. ದೂರಿನ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಇದನ್ನು ಪ್ರಶ್ನಿಸಿ ಚೇತನ್ ಹೈಕೋರ್ಟ್ ಮೆಟ್ಟಿಲೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net