ಲೈಂಗಿಕ ಕಿರುಕುಳ ಕೊಟ್ಟು ಹೆದರಿಸಿದ, ಮಿಲನಕ್ಕೆ ನಿರಾಕರಿಸಿದಳೆಂದು ಕೊಂದ

devendran
Published on

ಚೆನ್ನೈ: ಯುವತಿಯೊಬ್ಬಳ ಸೌಂದರ್ಯಕ್ಕೆ ಮಾರುಹೋಗಿದ್ದ ಡಿಎಂಕೆ ಯುವ ಘಟಕದ ಪದಾಧಿಕಾರಿಯೊಬ್ಬ ಆಕೆಗೆ ಸಾಕಷ್ಟು ಲೈಂಗಿಕ ಕಿರುಕುಳ ಕೊಟ್ಟಿದ್ದ. ಹೆದರಿಸಿ ಬೆದರಿಸಿದರೂ ದೈಹಿಕ ಸಂಪರ್ಕಕ್ಕೆ ಸಹಕರಿಸಲು ಒಪ್ಪದಿದ್ದಾಗ ಆಕೆಯನ್ನು ಕೊಂದು ಪರಾರಿಯಾಗಿದ್ದಾನೆ.

ದೇವೇಂದ್ರನ್​ ಪರಾರಿಯಾಗಿರುವ ಕೊಲೆಗಾರ. ಶಶಿಕಲಾ ಕೊಲೆಯಾದಾಕೆ. ತಮಿಳುನಾಡಿನ ಚೆಂಗಾಲಪಟ್ಟು ಜಿಲ್ಲೆಯ ಚೆಯ್ಯೂರು ಸಮೀಪದ ನೈನಾರ್​ ಕುಪ್ಪಂ ಎಂಬಲ್ಲಿ ಈ ಕೊಲೆ ನಡೆದಿದೆ. ಕೊಲೆಗೀಡಾದ ಯುವತಿಯ ಸಹೋದರ ನೀಡಿರುವ ದೂರನ್ನು ಸ್ವೀಕರಿಸಿ, ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಶಶಿಕಲಾ ನೈನಾರ್​ ಕುಪ್ಪಂ ಬಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಿನವೂ ಈಕೆಯನ್ನು ಹಿಂಬಾಲಿಸುತ್ತಿದ್ದ ದೇವೇಂದ್ರನ್​ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅದೊಂದು ದಿನ ಈಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಲೇಬೇಕು ಎಂಬ ಹಟಕ್ಕೆ ಬಿದ್ದ ಆತ, ಅದಕ್ಕಾಗಿ ಆಕೆಯನ್ನು ಪೀಡಿಸಿದ್ದ. ಆದರೆ ಆಕೆ ಒಪ್ಪದಿದ್ದಾಗ ಆಕೆಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದ: ದೇವೇಂದ್ರನ್​ ತನ್ನ ಸಹೋದರ ಪುರುಷೋತ್ತಮನ ಜತೆಗೂಡಿ ಶಶಿಕಲಾ ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದ. ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್​ ಮಾಡಿ, ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆ ದೇವೇಂದ್ರನ್​ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಆದರೆ ತುಂಬಾ ದಿಟ್ಟೆಯಾಗಿದ್ದ ಶಶಿಕಲಾ ಇದಾವುದಕ್ಕೂ ಜಗ್ಗಿರಲಿಲ್ಲ. ಅಲ್ಲದೆ ತನ್ನ ಪಾಲಕರಿಗೆ ಈ ಬಗ್ಗೆ ತಿಳಿಸಿ ತಕ್ಕಶಾಸ್ತಿ ಮಾಡಿಸುವುದಾಗಿ ದೇವೇಂದ್ರನ್​ನನ್ನೇ ಬೆದರಿಸಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಾದ ದೇವೇಂದ್ರನ್​ ಕತ್ತು ಹಿಸುಕಿ ಆಕೆಯನ್ನು ಕೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲು ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net