ನೆರೆಮನೆಗೆ ಎಳನೀರು ಬಿಟ್ಟ ‘ಡೊಂಕು ತೆಂಗು’! VCKಗೆ ಡಿಎಂಕೆ ಸಂಸದ ವ್ಯಂಗ್ಯ: TVK ಖಡಕ್ ಕೌಂಟರ್

TVK
TVK
Published on
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಸದ್ಯ ‘ತೆಂಗಿನ ಮರ’ದ ಜಗಳ ತಾರಕಕ್ಕೇರಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಡಿಎಂಕೆ (DMK) ಮತ್ತು ಅದರ ಮಾಜಿ ಮಿತ್ರಪಕ್ಷ ವಿಸಿಕೆ (VCK) ನಡುವೆ ಕಾವೇರಿದ ರಾಜಕೀಯ ವಾಕ್ಸಮರ ಶುರುವಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ವಿಸಿಕೆ ಬೆಂಬಲ ನೀಡಿದ ಬೆನ್ನಲ್ಲೇ, ಈ ಮೈತ್ರಿ ಮುನಿಸು ಈಗ ತಮಿಳು ಸಾಹಿತ್ಯದ ರೂಪಕಗಳ ಮೂಲಕ ಬೀದಿಗೆ ಬಂದಿದೆ. ಇದಕ್ಕೆ ಟಿವಿಕೆ ಕೂಡ ಡಿಎಂಕೆಗೆ ಖಡಕ್ ತಿರುಗೇಟು ನೀಡಿದೆ.

ಡೊಂಕು ತೆಂಗಿನ ಮರ: ಡಿಎಂಕೆ ವ್ಯಂಗ್ಯ

ವಿವಾದದ ಕಿಡಿ ಹೊತ್ತಿಸಿದ್ದು ಡಿಎಂಕೆ ಸಂಸದ ಎ. ರಾಜಾ ಅವರ ಒಂದು ಟ್ವೀಟ್ (X ಪೋಸ್ಟ್). ತಮಿಳು ಶಾಸ್ತ್ರೀಯ ಸಾಹಿತ್ಯದ ‘ಮುತ್ತತ್ತೇಂಗು’ (ಡೊಂಕಾಗಿ ಬೆಳೆದು ನೆರೆಮನೆಗೆ ಫಲ ನೀಡುವ ತೆಂಗಿನ ಮರ) ಎಂಬ ರೂಪಕವನ್ನು ಬಳಸಿ ಅವರು ವಿಸಿಕೆ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.
"ನನ್ನ ಮನೆಯ ತೋಟದಲ್ಲಿರುವ ತೆಂಗಿನ ಮರವು, ಬಾಗಿಕೊಂಡು ಎದುರು ಮನೆಗೆ ಎಳನೀರನ್ನು ನೀಡಿದರೆ, ಸಾಹಿತ್ಯದಲ್ಲಿ ಅದಕ್ಕೆ 'ಮುತ್ತತ್ತೇಂಗು' ಎನ್ನಲಾಗುತ್ತದೆ. ಆದರೆ, ರಾಜಕಾರಣದಲ್ಲಿ ಇದಕ್ಕೆ ಏನೆಂದು ಹೆಸರಿಡಬೇಕು?" ಎಂದು ರಾಜಾ ಪ್ರಶ್ನಿಸಿದ್ದರು.
ಮತ್ತೊಂದು ಪೋಸ್ಟ್‌ನಲ್ಲಿ ಪೆರಿಯಾರ್ ಅವರ ವಿಚಾರಧಾರೆಯನ್ನು ಉಲ್ಲೇಖಿಸಿ, "ಪರಿಸ್ಥಿತಿ ಬದಲಾಗುವವರೆಗೆ ಕಾಯುತ್ತೇವೆ, ಹೋರಾಟ ಮುಂದುವರಿಸುತ್ತೇವೆ, ಗೆಲುವು ನಮ್ಮದೇ" ಎಂದಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ವಿಸಿಕೆ ಪಕ್ಷವು ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ಟಿವಿಕೆ ಜೊತೆ ಕೈಜೋಡಿಸಿರುವುದನ್ನು ರಾಜಾ ‘ಸ್ವಾರ್ಥ ರಾಜಕಾರಣ’ ಎಂದು ಬಿಂಬಿಸಲು ಯತ್ನಿಸಿದರು.

ಅಧಿಕಾರಕ್ಕಾಗಿ ಇಷ್ಟೊಂದು ಆಕ್ರೋಶವೇಕೆ?: ವಿಸಿಕೆ ತಿರುಗೇಟು

ಡಿಎಂಕೆ ಸಂಸದನ ಈ ಸಾಹಿತ್ಯಿಕ ಚಾಟಿ ಏಟಿಗೆ ವಿಸಿಕೆ ಶಾಸಕ ಎಸ್.ಎಸ್. ಬಾಲಾಜಿ ಕವನದ ರೂಪದಲ್ಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಶೋಷಿತ ಸಮುದಾಯವನ್ನು ಪ್ರತಿನಿಧಿಸುವ ಪಕ್ಷವೊಂದು ಅಧಿಕಾರಕ್ಕೆ ಬರುವುದನ್ನು ಕಂಡು ಡಿಎಂಕೆ ಯಾಕೆ ಇಷ್ಟೊಂದು ಅಸಹನೆಗೊಳ್ಳುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
"ಸರಳ ಜನರಿಗೆ ಅಧಿಕಾರ ಸಿಗುತ್ತಿರುವುದನ್ನು ಕಂಡು ಈ ಪರಿ ಆಕ್ರೋಶವೇಕೆ? ನಿಮ್ಮ ಅಸಹಾಯಕತೆ ಇಲ್ಲಿ ಅವಹೇಳನದ ರೂಪದಲ್ಲಿ ಹೊರಬರುತ್ತಿದೆ. ಇಂತಹ ಕೀಳುಮಟ್ಟದ ಟೀಕೆಗಳನ್ನು ನಾವು ಶಾಂತಿಯಿಂದಲೇ ದಾಟುತ್ತೇವೆ. ಆದರೆ, ನಿಮ್ಮ ಅನ್ಯಾಯ ಹೀಗೆಯೇ ಮುಂದುವರಿದರೆ, ಆಕ್ರೋಶದ ಜ್ವಾಲೆಯನ್ನು ತಡೆಯಲಾಗದೆ ನೀವೇ ಸುಟ್ಟುಹೋಗುತ್ತೀರಿ," ಎಂದು ಬಾಲಾಜಿ ಎಚ್ಚರಿಸಿದ್ದಾರೆ.

ಟಿವಿಕೆ ಆಕ್ರೋಶ

ಮಿತ್ರಪಕ್ಷ ವಿಸಿಕೆ ಪರವಾಗಿ ಅಖಾಡಕ್ಕಿಳಿದ ನಟ ವಿಜಯ್ ಅವರ ಟಿವಿಕೆ (TVK) ಪಕ್ಷ, ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಹಂಚಿಕೆ ಸಹಜ ಪ್ರಕ್ರಿಯೆ. ಅದನ್ನು ಪ್ರಶ್ನಿಸುವ ನೆಪದಲ್ಲಿ ಡಿಎಂಕೆ ರಾಜಕೀಯ ಸೌಜನ್ಯದ ಎಲ್ಲ ಗೆರೆಗಳನ್ನು ದಾಟಿದೆ ಎಂದು ಟಿವಿಕೆ ಹೇಳಿದೆ.
"ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪರ್ಯಾಯ ರಾಜಕಾರಣ ಮಾಡಲು ಬಯಸುವ ಪಕ್ಷಗಳನ್ನು ಹೆದರಿಸುವುದು, ಕೀಳಾಗಿ ನಿಂದಿಸುವುದು ಡಿಎಂಕೆಯ ಹಳೇ ಚಾಳಿ. ಈ ಮೂಲಕ ಡಿಎಂಕೆ ತನ್ನ ಅಹಂಕಾರವನ್ನು ಪ್ರದರ್ಶಿಸುತ್ತಿದೆ. ಟಿವಿಕೆಯ ಒಳಗೊಳ್ಳುವಿಕೆಯ ರಾಜಕಾರಣ ಎಲ್ಲರಿಗೂ ಅಧಿಕಾರ ಹಂಚುವುದನ್ನು ಪ್ರತಿಪಾದಿಸುತ್ತದೆ. ಇದರಿಂದ ತಮ್ಮ ಕುಟುಂಬ ರಾಜಕಾರಣದ ಏಕಸ್ವಾಮ್ಯ ಮುರಿದುಬೀಳುತ್ತದೆ ಎಂಬ ಭೀತಿಯಿಂದ ಡಿಎಂಕೆ ನಾಯಕರು ಸಮಾಧಾನ ಕಳೆದುಕೊಂಡು ಏನೇನೋ ಬಡಲಾಯಿಸುತ್ತಿದ್ದಾರೆ," ಎಂದು ಟಿವಿಕೆ ಐಟಿ ವಿಭಾಗ ಲೇವಡಿ ಮಾಡಿದೆ.

ಮೈತ್ರಿ ಮುರಿಯಲು ಕಾರಣವೇನು? (ಹಿನ್ನೆಲೆ)

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮತ್ತು ವಿಸಿಕೆ ಒಟ್ಟಾಗಿಯೇ ಸ್ಪರ್ಧಿಸಿದ್ದವು. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸುಲಭವಾಗಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತಾದರೂ, ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆಗೆ ಶಾಕ್ ನೀಡಿತು. ಆದರೆ, ಟಿವಿಕೆಗೆ ಬಹುಮತಕ್ಕೆ (118 ಸ್ಥಾನ) 10 ಸೀಟುಗಳ ಕೊರತೆಯಿತ್ತು.
ಕಾಂಗ್ರೆಸ್ ಪಕ್ಷದ 5 ಶಾಸಕರು ವಿಜಯ್ ಅವರಿಗೆ ಬೆಂಬಲ ಸೂಚಿಸಿದರು. ಇದಾದ ನಂತರ ವಿಸಿಕೆ ಮತ್ತು ಇತರ ಕೆಲವು ಪಕ್ಷಗಳು ನಾಟಕೀಯ ಬೆಳವಣಿಗೆಯಲ್ಲಿ ಟಿವಿಕೆಗೆ ಬೆಂಬಲ ಘೋಷಿಸಿದವು. ಆರಂಭದಲ್ಲಿ ಕೇವಲ ಹೊರಗಿನಿಂದ ಬೆಂಬಲ ನೀಡಬಹುದು ಎನ್ನಲಾಗಿದ್ದ ವಿಸಿಕೆ, ಈಗ ವಿಜಯ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆದು ಸರ್ಕಾರದಲ್ಲಿ ಭಾಗಿಯಾಗಲು ನಿರ್ಧರಿಸಿದೆ. ಈ ಬೆಳವಣಿಗೆಯೇ ಡಿಎಂಕೆ ನಾಯಕರ ಕೆಂಗಣ್ಣಿಗೆ ಕಾರಣವಾಗಿದ್ದು, ಸದ್ಯ ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net