ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ: ಡಿ.ಕೆ.ಶಿವಕುಮಾರ್

dcm dk
Published on

ಬೆಂಗಳೂರು:
ನನಗೆ ಒಕ್ಕಲಿಗ ನಾಯಕತ್ವದ ಪಟ್ಟ ಬೇಡ. ಕಾಂಗ್ರೆಸ್ ಪಕ್ಷ ನಾಲ್ಕು ವರ್ಷಗಳ ಹಿಂದೆಯೇ ರಾಜ್ಯದ ಅಧ್ಯಕ್ಷನನ್ನಾಗಿ ಮಾಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ಆ ಸಮಾಜಕ್ಕೆ ರಕ್ಷಣೆ ಕೊಡುವ ಜವಾಬ್ದಾರಿ ಇದೆ. ಈ ಸಮುದಾಯದ ಜನರ ಸ್ವಾಭಿಮಾನ, ಗೌರವ ಉಳಿಸಲು ಅವರ ಸೇವೆ ಮಾಡುತ್ತೇನೆ. ಅದು ನನ್ನ ಧರ್ಮ. ಉಳಿದಂತೆ ನನಗೆ ನಾಯಕತ್ವದ ಪಟ್ಟ ಬೇಡ ಎಂದರು.
ರೇವಣ್ಣ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಗೃಹಮಂತ್ರಿಗಳು ಹಾಗೂ ಎಸ್‌ಐಟಿಯವರು ಇದ್ದಾರೆ. ಅವರು ಈ ವಿಚಾರವಾಗಿ ಉತ್ತರ ನೀಡುತ್ತಾರೆ. ಚುನಾವಣೆ ಪ್ರಚಾರದಲ್ಲಿ ನಾನು ನಿರತನಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಗಿಲ್ಲ ಎಂದರು.

ನಿಲುವು ಬದಲಿಸುತ್ತಿರುವುದು ಏಕೆ?
ಕಳೆದ ವಿಧಾನಸಭೆ ಚುನಾವಣೆಯಿಂದ ಈಚೆಗೆ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ಗಮನಿಸಿದರೆ, ಕುಮಾರಸ್ವಾಮಿ ಮಾತು ಆಗಾಗ್ಗೆ ಬದಲಾಗುತ್ತಲೇ ಬಂದಿದೆ. ಈಗ ಪೆನ್ ಡ್ರೈವ್ ಪ್ರಕರಣದಲ್ಲೂ ಅವರು ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದು, ನಿಲುವು ಬದಲಿಸುತ್ತಿದ್ದಾರೆ ಎಂದರು. ಮೇ 7 ರವರೆಗೆ ಯಾಕೆ ಕಾಯಬೇಕು? ಇದರ ಮೂಲ ಏನು? ಇದರ ಹಿನ್ನೆಲೆ ಯಾರು ಎಂದು ನಾವು ಬಿಚ್ಚಿ ಇಡಬೇಕಾ? ಇದು ಅವರ ಕುಟುಂಬದ ಆಂತರಿಕ ವಿಚಾರ. ಈ ಬಗ್ಗೆ ಕುಮಾರಸ್ವಾಮಿ ಅವರೇ, ಉಪ್ಪು ತಿಂದವರು ನೀರು ಕುಡಿಯಬೇಕು, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ ಎಂದು ಹೇಳಿದ್ದಾರೆ ಎಂದರು.

ಜೆಡಿಎಸ್ ಶಾಸಕರು ಸಂಪರ್ಕದಲ್ಲಿಲ್ಲ
ಪ್ರಜ್ವಲ್ ರೇವಣ್ಣ ಅವರ ವಿಚಾರದಿಂದ ಜೆಡಿಎಸ್ ಪಕ್ಷದ 12 ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುವುದು ಸುಳ್ಳು, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ ಎಂದರು. ಜೆಡಿಎಸ್ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಅವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದರು.

ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ
ಎಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ದಕ್ಷಿಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟದ ಭಾಗಗಳಲ್ಲಿ ಕಾಂಗ್ರೆಸ್ ಹೆಚ್ಚಿನ 12 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದಕ್ಕೆ ಐದೂ ಸೀಟು ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಗ್ಯಾರಂಟಿ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಖರಿ ಜನರಿಗೆ ಮೆಚ್ಚುಗೆಯಾಗಿದೆ. ಹಳ್ಳಿ ಮಟ್ಟದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಗಂಟೆಗೊಂದು ಗಳಿಗೆಗೊಂದು
ಬಿಜೆಪಿಯವರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಾರೆ. ಶಿವರಾಮೇಗೌಡರು
ಬಿಜೆಪಿಯಲ್ಲಿದ್ದು, ಅವರು ಅವರ ಪಕ್ಷದ ಬಗ್ಗೆ ಏನಾದರೂ ಹೇಳಲಿ. ಅದು ಆ ಪಕ್ಷದ ವಿಚಾರ.
ಇಂಗ್ಲೆಂಡ್‌ನಲ್ಲಿ ರೇವಣ್ಣ ಆ ವಿಚಾರ ನಾನು ಕೇಳಿದ್ದೇನೆ. ಆಗ ಹೊಟೇಲ್ನಿಂದ ರೇವಣ್ಣ ಅವರನ್ನು ಖಾಲಿ ಮಾಡಿಸಿದ್ದರು ಎಂದು ಗೊತ್ತಿದ್ದು, ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಮಳೆಗಾಗಿ ಪ್ರಾರ್ಥನ
ಮಳೆ ಬೀಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಒಂದು ಸುತ್ತು ಮಳೆ ಬಿದ್ದರೆ ಎಷ್ಟು ಇಂಧನ ಉಳಿಯುತ್ತದೆ. ಆರೋಗ್ಯ ಸುಧಾರಿಸುತ್ತದೆ. ಸಾವಿರಾರು ಕೋಟಿ ಉಳಿಯುತ್ತದೆ. ಮಳೆ ಬೀಳದೇ ಇದ್ದರೆ ನೀರಿಗಾಗಿ ಕೊಳವೆ ಬಾವಿ ಕೊರೆಯುತ್ತಲೇ ಇರುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net