ತಿಹಾರ್ ಜೈಲಿಗೆ ಡಿಕೆಶಿ; ಎಚ್‌ಡಿಕೆಗೆ ವರದಿ ಸಿಕ್ಕಿರಬಹುದು; ಮಾಜಿ ಸಚಿವ ಮುನಿರತ್ನ ಅಭಿಮತ

Muniratna
Published on

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಮಾತ್ರವಲ್ಲ, ಮಾಜಿ ಪ್ರಧಾನಿ ದೇವೇಗೌಡರ ಮಗ. ಅವರಿಗೆ ಮಾಹಿತಿ ಅಥವಾ ವರದಿ ಸಿಕ್ಕಿರಬಹುದು. ಹಾಗಾಗಿ ಹೇಳಿದ್ದಾರೆ ಎಂದು ಮಾಜಿ ಸಚಿವ ಮುನಿರತ್ನ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಜೆಡಿಎಸ್ ಜತೆಗೆ ಮೈತ್ರಿಗೆ ಬಿಜೆಪಿ ವರಿಷ್ಠರು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಮೈತ್ರಿ ಮಾತುಕತೆಗೆ ನಮ್ಮನ್ನು ಪರಿಗಣಿಸಿಲ್ಲ, ಕೇಳಿಲ್ಲವೆಂದು ಕೆಲವು ನಾಯಕರು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಮೌನವಹಿಸಿದ್ದರೇಕೆ ? ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ತಿವಿದರು.

ಹಿರಿಯ ನಾಯಕರಾದ ವಿ.ಸೋಮಣ್ಣ ಅವರಿಗೆ ಅನ್ಯಾಯವಾಗಿರುವುದು ನಿಜ. ಎರಡು ಕ್ಷೇತ್ರಗಳ ಬದಲು ಒಂದು ಕಡೆ ಸ್ಪರ್ಧೆಗೆ ಅವಕಾಶ ನೀಡಬೇಕಾಗಿತ್ತು. ಒಳ್ಳೆಯ ಹೆಸರಿರುವ ವ್ಯಕ್ತಿ ಸೋಮಣ್ಣ ಅವರಿಗೆ ಪಕ್ಷದ ವರಿಷ್ಠರು ಸೂಕ್ತ ಸ್ಥಾನಮಾನ ನೀಡುವ ವಿಶ್ವಾಸವಿದೆ ಎಂದರು.

ಬಲಿಪಶು ನಿಶ್ಚಿತ

ಬಿಬಿಎಂಪಿ ಚುನಾವಣೆಗೆ ಟಿಕೆಟ್ ಆಸೆ ತೋರಿಸಿ ಹಲವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ. ಈ ಮಾತು ನಂಬಿ ಹೋದವರ ಬಗ್ಗೆ ಕನಿಕರವಿದೆ. ಸೇರ್ಪಡೆಯಾದವರಿಗೆ ಅನುಕೂಲಕರ ವಾರ್ಡ್ ಮೀಸಲಾತಿಗೆ ಕಾಂಗ್ರೆಸ್‌ನೊಳಗೆ ತೀವ್ರ ವಿರೋಧವಿದೆ.

ಇದರಿಂದಾಗಿ ಪಕ್ಷದವರು, ಸೇರ್ಪಡೆಯಾದವರಿಗೆ ಸಮಾಧಾನಪಡಿಸಬೇಕಾದ ಸವಾಲು ಕಾಂಗ್ರೆಸ್ ನಾಯಕರಿಗೆ ಎದುರಾಗಿದೆ. ಈ ಬಿಕ್ಕಟ್ಟಿನಿಂದ ಪಾರಾಗುವ ಮಾರ್ಗೋಪಾಯವನ್ನು ಹುಡುಕಿದ್ದು, ಆ ಪಕ್ಷಕ್ಕೆ ಸೇರಿದವರು ಬಲಿಪಶುವಾಗುವುದು ನಿಶ್ಚಿತ ಎಂದು ಮುನಿರತ್ನ ಭವಿಷ್ಯ ನೀಡಿದರು.

ನಾಲ್ಕೈದು ವಾರ್ಡ್‌ಗಳ ಮೀಸಲಾತಿ ಹಂಚಿಕೆಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಡುತ್ತಾರೆ. ಈ ತಪ್ಪು ಪತ್ತೆ ಹಚ್ಚಿ ಯಾರಾದರೂ ಕೋರ್ಟ್‌ಗೆ ಹೋಗಲಿ, ಬಿಬಿಎಂಪಿ ಚುನಾವಣೆಗೆ ತಡೆ ಸಿಗಲೆಂದು ಕಾಂಗ್ರೆಸ್‌ನವರು ಬಯಸುತ್ತಿದ್ದು, ಮೀಸಲು ಮತ್ತು ಟಿಕೆಟ್‌ಗೆ ಹೆಚ್ಚಿದ ಒತ್ತಡ ತಪ್ಪಿಸಿಕೊಳ್ಳಲು ಚುನಾವಣೆ ಮುಂದೂಡುವ ಪ್ಲ್ಯಾನ್ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net