

ಬೆಂಗಳೂರು: ರಾಜ್ಯವು ಸೇರಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಅಲೆಯಿರುವಾಗ ಆಪರೇಷನ್ ಹಸ್ತ ಗಿಮಿಕ್ ನಡೆಯುವುದಿಲ್ಲ. ಮಧ್ಯರಾತ್ರಿ ತರಾತುರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ತತ್ಕಾಲ್ ಸ್ಕೀಂ’ ವರ್ಕೌಟ್ ಆಗುವುದಿಲ್ಲವೆಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಣಕವಾಡಿದರು.
ಲೋಕಸಭೆ ಚುನಾವಣೆಗೆ ಪಕ್ಷದ ಸಾಂಸ್ಕೃತಿಕ ಪ್ರಚಾರ, ಮತ ಜಾಗೃತಿ ಭಾಗವಾಗಿ ಬೀದಿ ನಾಟಕಗಳಿಗೆ ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಶುಕ್ರವಾರ ಚಾಲನೆ ನೀಡಿದರು. ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಡಿ.ಕೆ.ಶಿವಕುಮಾರ್ ಗುರುವಾರ ಮಧ್ಯರಾತ್ರಿ ಯಾವ ಪರಿಸ್ಥಿತಿಯಲ್ಲಿದ್ದರೋ ಗೊತ್ತಿಲ್ಲ. ಆದರೆ ಯಾರು, ಏನು ಅಂತ ನೋಡದೆ ಅವರದೇ ಪಕ್ಷದ ಯುವ ಕಾಂಗ್ರೆಸ್ ಮುಖಂಡನಿಗೆ ಹಾರ ಹಾಕಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಕಿಚಾಯಿಸಿದರು.
ಲೋಕಸಭೆ ಚುನಾವಣೆ ಮುಗಿದ ನಂತರ ಸೇರಿಸಿಕೊಳ್ಳಬಹುದಿತ್ತು. ಯಾರು ಸಿಕ್ಕಿದರೂ ಹಾರ ಹಾಕಿ ಸೇರಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಗಿಮಿಕ್ ನಡೆಯುವುದಿಲ್ಲ, ಜನರು ಮೋದಿ ಪರವಾಗಿದ್ದಾರೆ. ಸೋಲು ತಿಳಿದು ಆತುರಾತುರವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ರಾಮೇಶ್ವರಂ ಕೆೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಅನೇಕ ಮಂತ್ರಿಗಳು ತಾಳ್ಮೆಗೆಟ್ಟವರಂತೆ ಹೇಳಿಕೆ ನೀಡಿದರು. ಎನ್‌ಐಎ ತನಿಖೆಗೆ ಮುನ್ನ, ತನಿಖೆ ಹಂತದಲ್ಲಿಯೂ ತಮ್ಮ ತೀರ್ಪು ನೀಡಿಬಿಟ್ಟಿದ್ದರು.
ಆದರೆ ಸ್ಫೋಟದ ಹಿಂದಿರುವ ದುಷ್ಕೃತ್ಯದ ಕೈಗಳನ್ನು ಎನ್‌ಐಎ ತಂಡ ಪತ್ತೆ ಹಚ್ಚಿದೆ. ಶಂಕಿತ ಉಗ್ರರ ಕೈವಾಡವಿರುವ ಆರೋಪದಡಿ ಪಶ್ಚಿಮಬಂಗಾಳದಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಕ್ಷಿಪ್ರಗತಿಯಲ್ಲಿ ದುರುಳರನ್ನು ಹಿಡಿದ ಎನ್‌ಐಎ ತಂಡದ ಕಾರ್ಯಾಚರಣೆ ಶ್ಲಾಘನೀಯ ಎಂದರು.
ಹೋಟೆಲ್ ಉದ್ಯಮದ ಪೈಪೋಟಿಯಿಂದಾಗಿ ಈ ಸ್ಫೋಟ ಸಂಭವಿಸಿರಬಹುದು ಎಂಬ ಹೇಳಿಕೆ ನೀಡಿದ್ದ ಸಚಿವರು ಈಗ ಏನು ಹೇಳುತ್ತಾರೆ. ಓಲೈಕೆ ರಾಜಕಾರಣ ಅಲ್ಲವೆ ? ಎಂಬ ಪ್ರಶ್ನೆಗೆ ಆಯಾ ಸಚಿವರೇ ಉತ್ತರಿಸಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರೂ ಕಾಲಮಿಂಚಿಲ್ಲ. ಹಿರಿಯ ಕೆ.ಎಸ್.ಈಶ್ವರಪ್ಪ ತಮ್ಮ ಗೌರವ ಉಳಿಸಿಕೊಳ್ಳುವಂತಹ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ವ್ಯಕ್ತಿಗಿಂತ ಪಕ್ಷದ ದೊಡ್ಡದು ಎಂದು ಅವರೇ ಹೇಳುತ್ತಿದ್ದರು. ಮಗನಿಗೆ ಟಿಕೆಟ್ ತಪ್ಪಿದ ಬೇಸರ ಇರಬಹುದು. ಆದರೂ ಈಶ್ವರಪ್ಪನವರು ಮನಸ್ಸು ಬದಲಿಸಿ, ನಾಮಪತ್ರ ಹಿಂಪಡೆದು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮನವಿ ಮಾಡಿದರು.
ನಂತರ ಪಕ್ಷ ಏರ್ಪಡಿಸಿದ್ದ ಮತ ಜಾಗೃತಿಗಾಗಿ ಬೀದಿ ನಾಟಕಗಳಿಗೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಶುಕ್ರವಾರ ಚಾಲನೆ ನೀಡಿದರು. ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ, ಪಕ್ಷದ ಮುಖಂಡರಾದ ಎಸ್.ಹರೀಶ್, ಗಣೇಶರಾವ್ ಕೇಸರ್ಕರ್, ಪ್ರಶಾಂತ ಮಾಪನೂರ್ ಇನ್ನಿತರರು ಇದ್ದರು.