

ಹಾರೋಹಳ್ಳಿ : ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಮಗೂ ಡಿ.ಕೆ.ಶಿವಕುಮಾರ್‌ಗೂ ಒಳ ಒಪ್ಪಂದವಾಗಿಲ್ಲ, ನಮ್ಮ ಪಕ್ಷವನ್ನು ಸದೃಢಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ತಿಳಿಸಿದರು.
ಕನಕಪುರ ತಾಲೂಕಿನ ಮರಳವಾಡಿ ಹೋಬಳಿ ಚೀಲೂರಿನಲ್ಲಿ ಭಾನುವಾರ ಕಾರ್ಯಕರ್ತರೊಂದಿಗೆ ರೋಡ್‌ಶೋ ನಡೆಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕನಕಪುರ ಕ್ಷೇತ್ರವನ್ನು ಬಿಡುವ ಪ್ರಶ್ನೆಯೇ ಇಲ್ಲ, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಒಬ್ಬ ಉತ್ತಮ ಅಭ್ಯರ್ಥಿಯನ್ನು ಹಾಕಲಾಗುವುದು. ಈಗಾಗಲೇ ಈ ವಿಷಯವಾಗಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ತೀರ್ಮಾನ ಮಾಡಿದ್ದಾರೆ. ನಮಗೆ ಯಾರಿಂದಲೂ ಭಯವಿಲ್ಲ, ಕಾರ್ಯಕರ್ತರ ಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಕನಕಪುರ ಕಾರ್ಯಕರ್ತರ ಸಭೆ ನಡೆಸುವೆ ಎಂದರು.
ಜನರ ಭಾವನೆಗಳು ನಮಗೆ ಅರ್ಥವಾಗಿವೆ. ನಾವು ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ನಮ್ಮದೇ ಆದ ಕಾರ್ಯಕರ್ತರಿದ್ದಾರೆ, ನಾವು ಅವರನ್ನು ಉಳಿಸಿಕೊಳ್ಳುತ್ತೇವೆ, ಹಳೇ ಮೈಸೂರು ಮತ್ತು ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೋರಾಟ ಇರುವುದರಿಂದ ನಾವು ಎಲ್ಲವನ್ನು ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಗೆದ್ದ ಗ್ರಾಪಂ ಸದಸ್ಯರಿಗೆ ಸನ್ಮಾನ ಮಾಡಿದಂತೆ ಕನಕಪುರದಲ್ಲಿ ಗೆದ್ದಿರುವ ಸದಸ್ಯರಿಗೂ ನಾವು ಸನ್ಮಾನ ಮಾಡಲಿದ್ದೇವೆ. ಅವರ ಜತೆ ನಾವಿದ್ದೇವೆ, ಸ್ವಲ್ಪ ಅಂತರವಾಗಿರಬಹುದು ಅದನ್ನೆಲ್ಲಾ ಸರಿಪಡಿಸುವ ಕೆಲಸವನ್ನು ಮಾಡಲಾಗುತ್ತದೆ. ಎಲ್ಲವೂ ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದು ಹೇಳಿದರು.
ಮುಖಂಡರಾದ ರಾಮಕೃಷ್ಣ, ಭುಜಂಗಯ್ಯ, ಈರೇಗೌಡ, ಶಿವಾನಂದ, ಕೆ.ಎನ್.ರಾಮು, ಲಕ್ಷ್ಮಣ್, ಬನ್ನಿಕುಪ್ಪೆರಾಜು, ಮೇಡಮಾರನಹಳ್ಳಿಕುಮಾರ್, ಸಿದ್ದಪ್ಪ, ಪ್ರದೀಪ್, ಪ್ರದೀಪ್‌ಕುಮಾರ್, ಜಿ.ಎಸ್‌ಮಲ್ಲಯ್ಯ, ತಿಮ್ಮಪ್ಪ, ರವಿ, ನಾಗರಾಜು, ದೊಡ್ಡಕಲ್ಲುಬಾಳ್‌ಮಹದೇವ್, ಮುನಿರಾಜು ಇತರರು ಇದ್ದರು.
ನೀರಿನ ಸಮಸ್ಯೆ ನಿವಾರಣೆಗೆ ಕ್ರಮ : ರಾಮನಗರ ವಿಧಾನಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉದ್ಭವವಾಗಬಹುದು, ಆದ್ದರಿಂದ ಈಗಾಗಲೇ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ಖರೀದಿಸಲಾಗಿದೆ. ಎಲ್ಲ್ಲಿ ಅವಶ್ಯವೋ ಅಲ್ಲಿ ನೀರು ಪೂರೈಸಲಾಗುತ್ತದೆ. ಚನ್ನಪಟ್ಟಣ, ರಾಮನಗರ, ಮಂಡ್ಯ ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿ ಜೆಡಿಎಸ್ ಗಟ್ಟಿಗೊಳಿಸುವ ಕೆಲಸ ಮಾಡುವುದು ಜವಾಬ್ದಾರಿಯಾಗಿದ್ದು ಪಕ್ಷವನ್ನು ಅಧಿಕಾರಕ್ಕೆ ತರುವುದು ಉದ್ದೇಶವಾಗಿದೆ ಎಂದರು.
ಚರ್ಚೆಗೆ ಗ್ರಾಸವಾದ ರೋಡ್ ಶೋ : ನಿಖಿಲ್ ಕುಮಾರಸ್ವಾಮಿ ಭಾನುವಾರ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಚೀಲೂರಿನಲ್ಲಿ ರೋಡ್ ಶೋ ನಡೆಸಿದ್ದು, ಶಕ್ತಿ ಪ್ರದರ್ಶನಕ್ಕೋ ಅಥವಾ ತೇಪೆ ಹಚ್ಚುವುದಕ್ಕೋ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳೆದ 5 ದಿನಗಳ ಹಿಂದೆ ಗ್ರಾಮದಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಭಾಗವಹಿಸಿದ್ದ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ಮಾತನಾಡುತ್ತಾ ನಮ್ಮ ತಾತ ದೇವೇಗೌಡರು, ನಮ್ಮ ತಂದೆ ಕುಮಾರಸ್ವಾಮಿ, ನಮ್ಮ ತಾಯಿ ಅನಿತಾಕುಮಾರಸ್ವಾಮಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಗುಣಗಾನ ಮಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ರಾಜಕೀಯ ಭಾಷಣ ಸಾಕು ನಾಟಕದ ಬಗ್ಗೆ ಮಾತನಾಡಿ, ಇದು ಪಕ್ಷದ ವೇದಿಕೆಯಲ್ಲ ಎಂದು ಹೇಳಿದಾಗ ವೇದಿಕೆಯಲ್ಲೇ ಮಾತಿಗೆ ಮಾತು ಬೆಳೆದು ನಿಖಿಲ್ ಏಕವಚನದಲ್ಲಿ ಮತ್ತು ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ತೆರಳಿದ್ದರು.ಭಾನುವಾರ ಗ್ರಾಮದಲ್ಲಿ ರೋಡ್‌ಶೋ ನಡೆಸಿ ಶಕ್ತಿ ಪ್ರದರ್ಶನ ನಡೆಸಿದ್ದು, ಇದು ಕಳೆದ 5 ದಿನಗಳ ಹಿಂದೆ ನಡೆದ ಘಟನೆಗೆ ಪ್ರತೀಕಾರ, ಶಕ್ತಿ ಪ್ರದರ್ಶನ ಅಥವಾ ತೇಪೆ ಹಚ್ಚಲು ಬಂದಿದ್ದಾರೆಯೇ ಎನ್ನುವುದು ಚರ್ಚೆಯಾಗುತ್ತಿದೆ.