ಡಿಕೆಶಿ ಕ್ಷಮೆ ಕೇಳಬಾರದಿತ್ತು, ಮುಲಾಜಿಲ್ಲದೆ ರಾಜೀನಾಮೆ ಬಿಸಾಕಬೇಕಿತ್ತು: ಆರ್​.ಅಶೋಕ | Resigned

photo - 2025-08-26T211244.114
Published on

Resigned: ಸದನದಲ್ಲಿ ಆರ್​ಎಸ್​ಎಸ್​​ ಗೀತೆ ಹಾಡಿದ್ದಕ್ಕೆ, ಡಿಸಿಎಂ ಡಿಕೆ ಶಿವಕುಮಾರ್ ಇಂದು(ಆ.26) ತನ್ನ ಕಾರ್ಯಕರ್ತರು ಮತ್ತು ನಾಯಕರಿಗೆ​ ಕ್ಷಮೆ ಬೇಕಾದರೆ ಕೇಳುವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​.ಅಶೋಕ ಕಾಂಗ್ರೆಸ್​ನ್ನು ಟೀಕಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಆರ್​.ಅಶೋಕ, ''ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ, ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಇನ್ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ? ಎಂದು ವ್ಯಂಗ್ಯವಾಡಿದ್ದಾರೆ.

ಆರ್​ಎಸ್​ಎಸ್​ ಪ್ರಾರ್ಥನಾ ಗೀತೆಯ ಮೊದಲನೆಯ ಸಾಲಿನ ಸಾರಾಂಶ ಇಷ್ಟೇ. "ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ ಸಮಾನಳಾದ ತಾಯಿ ಭಾರತಾಂಬೆಗೆ ನನ್ನ ನಮಸ್ಕಾರಗಳು." ಜನ್ಮ ಕೊಟ್ಟ ಮಾತೃಭೂಮಿ ಬಗ್ಗೆ ಈ ಭಾವನೆ ಇಟ್ಟುಕೊಳ್ಳುವುದು ತಪ್ಪೇ? ತಾಯ್ನೆಲಕ್ಕೆ ನಮಸ್ಕಾರ ಮಾಡುವುದೇ ತಪ್ಪೇ? ಎಂದು ಪ್ರಶ್ನಿಸಿದ್ದಾರೆ.

ಕ್ಷಮೆ ಕೇಳಬಾರದಿತ್ತು, ರಾಜೀನಾಮೆ ಬಿಸಾಕಬೇಕಿತ್ತು

ಒಂದು ಕಡೆ ವಿಧಾನಸೌಧದಲ್ಲಿ "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದವರನ್ನ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷ, ಮತ್ತೊಂದು ಕಡೆ ತಾಯಿ ಭಾರತಾಂಬೆಗೆ ನಮಸ್ಕರಿಸುವವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದನ್ನು ದೇಶದ್ರೋಹಿ ಮನಸ್ಥಿತಿ ಅನ್ನದೇ ಇನ್ನೇನನ್ನಲು ಸಾಧ್ಯ?. ಇಷ್ಟಕ್ಕೂ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು? ಸೋನಿಯಾ ಗಾಂಧಿ ಅವರಾ? ರಾಹುಲ್ ಗಾಂಧಿ ಅವರಾ? ಕೆ.ಸಿ.ವೇಣುಗೋಪಾಲ್ ಅವರಾ? ಸುರ್ಜೆವಾಲಾ ಅವರಾ? ಅಥವಾ ಬಿ.ಕೆ.ಹರಿಪ್ರಸಾದ್​ ಹೇಳಿದ್ದಕ್ಕೆ ಕ್ಷಮೆ ಕೇಳಿದರಾ?

ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ, ಕಿಂಚಿತ್ತಾದರೂ ಧೈರ್ಯ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಕೇಳಲೇಬೇಕು ಎನ್ನುವ ಒತ್ತಡ ಇದ್ದಿದ್ದರೆ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು ಎಂದಿದ್ದಾರೆ.

"He who loves not his country can love nothing". ಅಂದರೆ "ತನ್ನ ಮಾತೃಭೂಮಿಯನ್ನು ಪ್ರೀತಿಸದವನು ಏನನ್ನೂ ಪ್ರೀತಿಸಲಾರ" ಎನ್ನುವ ಮಾತಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ "ಕುರ್ಚಿಯ ಮೇಲೆ ಪ್ರೀತಿ ಇದ್ದರೆ ದೇಶಪ್ರೇಮವನ್ನು ಬಿಡಬೇಕು" ಎನ್ನುವ ಪರಿಸ್ಥಿತಿ ಇದೆ. ಅಧಿಕಾರದ ಮೇಲಿನ ವ್ಯಾಮೋಹಕ್ಕೆ, ಜನ್ಮ ಕೊಟ್ಟ ತಾಯ್ನೆಲವನ್ನೇ ಬಿಟ್ಟುಕೊಡುವ so-called ನಾಯಕರು ನಾಡಿನ ಮುಖ್ಯಮಂತ್ರಿಗಳಾಗಲು ಹೊರಟಿರುವುದು ನಮ್ಮ ನಾಡಿನ ಸದ್ಯದ ದೊಡ್ಡ ದುರಂತ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net