ವಿಭಜನೆ vs ಅನುದಾನ ಸಮರ

Untitled design (3)
Published on

ಲೋಕಸಭಾ ಚುನಾವಣೆಗೆ ಮುನ್ನ ತಾರಕಕ್ಕೇರಿದ ಕಾಂಗ್ರೆಸ್-ಬಿಜೆಪಿ ತಿಕ್ಕಾಟ

ರಾಮಮಂದಿರ ವಿಷಯಾಂತರ, ಡಿಕೆಸು ಹೇಳಿಕೆ ಡ್ಯಾಮೇಜ್ ಕಂಟ್ರೋಲ್​ಯತ್ನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಲೋಕಸಭೆ ಚುನಾವಣೆಗೆ ಮುನ್ನ ಜನರ ಮನಸ್ಸನ್ನು ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿಗೆ ಇಳಿದಿದ್ದು, ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ವಿಚಾರ ಇಟ್ಟುಕೊಂಡು ಮನೆ ಮನೆಗೆ ತಲುಪುವ ಬಿಜೆಪಿ ಅಭಿಯಾನ ಕಾಂಗ್ರೆಸ್​ನ ನಿದ್ರೆಗೆಡಿಸಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ತಾರತಮ್ಯವಾಗುತ್ತಿದೆ ಎಂಬ ವಿಚಾರವನ್ನು ಜನರ ಮುಂದಿಟ್ಟು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಸಮರ ಸಾರಿದೆ. ಇಷ್ಟರ ನಡುವೆ ಸಂಸದ ಡಿ.ಕೆ. ಸುರೇಶ್​ರ ‘ದೇಶ ವಿಭಜನೆ’ ಕಿಡಿಯಿಂದ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್​ಗೂ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ.

ಭಾನುವಾರ ಬಿಜೆಪಿ ಕಾರ್ಯಕರ್ತರು ಡಿ.ಕೆ. ಸುರೇಶ್ ಮನೆ ಮುಂದೆ ಧರಣಿಗೆ ಮುಂದಾಗಿದ್ದು, ಪೊಲೀಸರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಕೆಲವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಕೆಲವರನ್ನು ವಶಕ್ಕೆ ಪಡೆಯುವಾಗ ತಳ್ಳಾಟ ನಡೆದು ಗಾಯವಾಗಿದೆ. ಇದು ತಮ್ಮ ಕಾರ್ಯಕರ್ತರ ಮೇಲಾದ ದೌರ್ಜನ್ಯ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಡಿ.ಕೆ. ಸುರೇಶ್ ಹೇಳಿಕೆಯಿಂದ ತೆರಿಗೆ ವಿಷಯ ಗೌಣವಾಗುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸುದ್ದಿಗೋಷ್ಠಿ ನಡೆಸಲಿದ್ದು, ಪುನಃ ಹಳಿ ಮೇಲೆ ತರಲು ಮುಂದಾಗಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ಯಾವ ಪ್ರಮಾಣದಲ್ಲಿ ತೆರಿಗೆ ಖೋತಾ ಆಗುತ್ತಿದೆ ಎಂಬುದನ್ನು ಅಂಕಿ-ಅಂಶ ಸಹಿತ ಜನರ ಮುಂದಿಡಲು ಬಯಸಿದ್ದಾರೆ. ಇನ್ನೊಂದೆಡೆ ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನಕ್ಕೆ ಸಿಎಂ ಬೆಂಬಲ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಹೋರಾಟ: ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಫೆ.7ರಂದು ದೆಹಲಿಯಲ್ಲಿ ಪ್ರತಿಭಟಿಸಿ ದೇಶದ ಗಮನ ಸೆಳೆಯಲು ಬಯಸಿದೆ. ಸಚಿವರು ಹಾಗೂ ಶಾಸಕರೊಂದಿಗೆ ಧರಣಿ ನಡೆಸಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದೆ.

ವಿಜಯೇಂದ್ರ ತೀವ್ರ ಆಕ್ಷೇಪ

ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಿದ್ದ ಸಂಸದ ಡಿ.ಕೆ. ಸುರೇಶ್ ನಿವಾಸದ ಎದುರು ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಅನಗತ್ಯ ಲಾಠಿ ಪ್ರಹಾರ ನಡೆಸಿ, ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಿ ಪ್ರೇರಿತ ಗೂಂಡಾಗಿರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಯಾರ ನಡೆಯನ್ನೂ ಬಿಜೆಪಿ ಸಹಿಸುವುದಿಲ್ಲ. ಎಷ್ಟೇ ಬಲಶಾಲಿಯಾದರೂ ಅವರು ಪಶ್ಚಾತಾಪ ಪಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧ ಎದುರು ಪ್ರತಿಭಟನೆ

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿ, ಜಿಎಸ್​ಟಿ ಕೌನ್ಸಿಲ್​ನಲ್ಲಿ ತಮ್ಮ ವಾದ ಮುಂದಿಡುವ ಬದಲು ಚುನಾವಣೆ ಕಾರಣಕ್ಕೆ ಹೋರಾಟ ಮಾಡುತ್ತಿದೆ. ಇದು ಜನರಿಗೂ ಗೊತ್ತಾಗಿದೆ. ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ ಬರುತ್ತಿದ್ದ ಅನುದಾನಕ್ಕೂ ಈಗ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬುದನ್ನೂ ಜನರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು. ಫೆ.7ರಂದು ಅವರು ದೆಹಲಿಯಲ್ಲಿ ಪ್ರತಿಭಟಿಸಿದರೆ, ನಾವು ವಿಧಾನಸೌಧ ಆವರಣ ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

"ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು". | ಸಿದ್ದರಾಮಯ್ಯ ಮುಖ್ಯಮಂತ್ರಿ "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತಕ್ಕಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಇದರ ಬಗ್ಗೆ ಜನರಿಗೆ ತಿಳಿಸಬೇಕು". | ಡಿ.ಕೆ ಶಿವಕುಮಾರ್ ಡಿಸಿಎಂ "ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಗೂಂಡಾ ರಾಜ್ಯ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ". | ಆರ್. ಅಶೋಕ ವಿಪಕ್ಷ ನಾಯಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.6ರಂದು ಮಧ್ಯ ಪ್ರದೇಶದ ಇಂಧೋರ್​ಗೆ ತೆರಳಿ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಮೊಮ್ಮಗನ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡು ರಾತ್ರಿಯೇ ದೆಹಲಿ ತಲುಲಿದ್ದಾರೆ. 7ರಂದು ಬೆಳಗ್ಗೆ ಧರಣಿ ನಡೆಸಲು ಉದ್ದೇಶಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್​ನಿಂದ ರಾಜ್ಯದಲ್ಲೂ ಹೋರಾಟ ನಡೆಸುವ ಬಗ್ಗೆ ಚರ್ಚೆಗಳು ನಡೆದಿವೆ. ರೂಪುರೇಷೆ ಅಂತಿಮವಾಗಿಲ್ಲ.

ಕಾಂಗ್ರೆಸ್ ವಾದ ಏನು?

ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ. 2018-19ರಿಂದ ಶೇ.40ರಷ್ಟು ಪಾಲು ಕಡಿಮೆಯಾಗಿದೆ

ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ಹಣ ನಷ್ಟವಾಗಿದೆ. ಪ್ರತಿ 100 ರೂ. ತೆರಿಗೆಯನ್ನು ಕೇಂದ್ರಕ್ಕೆ ನೀಡಿದರೆ 12-13 ರೂ. ಮಾತ್ರ ರಾಜ್ಯಕ್ಕೆ ವಾಪಸ್ ನೀಡಲಾಗುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯಗಳು ಎಂದಿಗೂ ನಮಗೆ ಮಾಡೆಲ್ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು.

ಬಿಜೆಪಿ ಪ್ರತಿವಾದ ಏನು?

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2004ರಿಂದ 2014ರ ವರೆಗೆ ರಾಜ್ಯಕ್ಕೆ ಕೊಟ್ಟಿದ್ದು 60 ಸಾವಿರ ಕೋಟಿ ಮಾತ್ರ.

2014ರಿಂದ 2024ರವರೆಗೆ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು 2 ಲಕ್ಷದ 36 ಸಾವಿರ ಕೋಟಿ ರೂಪಾಯಿ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆಯಿಂದ ಸಂಜೆವರೆಗೆ ಕೇಂದ್ರದ ಕಡೆ ಬೊಟ್ಟು ಮಾಡುವುದು ನಿಲ್ಲಿಸಲಿ.

ರಾಜ್ಯದಲ್ಲಿ ಒಬ್ಬನೇ ಒಬ್ಬ ಶಾಸಕನಿಗೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net