ಈಡುಗಾಯಿ ಹರಕೆ ತೀರಿಸಿದ ಡಿಕೆಶಿ; ದೇವಸ್ಥಾನದ ಹುಂಡಿಗೆ ಬಿತ್ತು 500 ರೂ. ನೋಟಿನ ಕಂತೆ ಕಂತೆ ಹಣ...

DKS
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಬಂದು ಕಬ್ಬಾಳಮ್ಮ ದೇವಿಗೆ ಈಡುಗಾಯಿ ಹರಕೆ ತೀರಿಸಿದ್ದಾರೆ. ಡಿ.ಕೆ.ಶಿವಕುಮಾರ್ ತಲಾ ಏಳು ಈಡುಗಾಯಿ ಒಡೆದಿದ್ದಾರೆ. ಪುತ್ರಿ ಐಶ್ವರ್ಯ ಹಾಗೂ ಅಳಿಯ ಅಮಾರ್ತ್ಯ ಹೆಗ್ಡೆ ತಲಾ ಒಂದೊಂದು ಈಡುಗಾಯಿ ಒಡೆದಿದ್ದಾರೆ.

ಡಿಕೆ ಶಿವಕುಮಾರ್ ಟೆಂಪಲ್ ರನ್!

ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ಡಿಕೆ ಶಿವಕುಮಾರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಟೆಂಪಲ್ ರನ್ ಮಾಡಿರುವ ಡಿಕೆಶಿ, ಕೆಂಕೇರಮ್ಮ ದೇವಸ್ಥಾನದ ಬಳಿಕ ಕಬ್ಬಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ 500 ರೂಪಾಯಿ ನೋಟಿನ ಕಂತೆ ಕಂತೆ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.

ನಾಮಪತ್ರ ಸಲ್ಲಿಕೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕನಕಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಕೆಂಕೇರಮ್ಮ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್​ ನಂತರ ಬೃಹತ್​ ಬೈಕ್​ ರ್‍ಯಾಲಿ ಹಾಗೂ ರೋಡ್​ಶೋ ನಡೆಸಿದರು. ಈ ವೇಳೆ ಅಪಾರ ಜನಸ್ತೋಮದ ನಡುವೆ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ರಾಜಕಾರಣ ವ್ಯವಸಾಯ ಇದ್ದಂತೆ

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಿಕೆಶಿ ರಾಜಕಾರಣ ಅನ್ನೋದು ವ್ಯವಸಾಯ ಇದ್ದಂತೆ. ವ್ಯವಸಾಯದಲ್ಲಿ ಹೇಗೆ ಬಿತ್ತನೆ ಹಾಕಿ, ನೀರು ಹಾಕಿ, ಪೋಷಣೆ ಮಾಡಿ ಬೆಳೆ ತಗೀತ್ತಾರೋ ಹಾಗೇ ಬೆಳೆ ಕಟಾವು ಮಾಡುವ ಸಮಯ ಚುನಾವಣೆಯಲ್ಲಿ ಬಂದಿದೆ. ನಾನು 35 ವರ್ಷಗಳ ಕಾಲ ವ್ಯವಸಾಯದಂತೆ ರಾಜಕಾರಣದಲ್ಲಿ ನೂರಾರು ನಾಯಕರನ್ನು ಬೆಳೆಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net