ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾತಿ ಎಂದು ಹೇಳಿದವರು ಯಾರು?: ಡಿಸಿಎಂ DK Shivakumar

DK Shivakumar
Published on

ಬೆಂಗಳೂರು: ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಎಂದು ಹೇಳಿದವರು ಯಾರು?. ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಅಲ್ಪಸಂಖ್ಯಾತರು ಎಂದರೆ ಕ್ರಿಶ್ಚಿಯನ್, ಜೈನ,‌ಪಾರ್ಸಿ, ಸಿಖ್ ಹೀಗೆ ಎಲ್ಲರೂ ಸೇರುತ್ತಾರೆ. ಈ ಹಿಂದೆ ಪರಿಶಿಷ್ಟ ಜಾತಿ,‌ ಪಂಗಡವರಿಗೆ ಗುತ್ತಿಗೆ ಮೀಸಲಾತಿ ನೀಡುವಂತೆ ತಿದ್ದುಪಡಿ ಮಾಡಿದ್ದೆವು ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar), ಕೇವಲ 2 ಕೋಟಿ ಮೊತ್ತಕ್ಕೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತದ‌‌ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ನಾವು ಬೇರೆ ಯಾರ ಹಕ್ಕನ್ನು ಇಲ್ಲಿ ಕಸಿದುಕೊಳ್ಳುತ್ತಿಲ್ಲ‌ ಅವರಿಗೂ ನಾವು ಬದುಕು ಕೊಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ತಯಾರಿದೆ

ಬಿಬಿಎಂಪಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಸಭೆಯನ್ನು ಕರೆಯಲಾಗಿದೆ. ನಂತರ ಎಲ್ಲಾ ಪಕ್ಷದವರನ್ನು ಸಭೆಗೆ ಕರೆಯಲಾಗುವುದು. ಅವರಲ್ಲಿಯೂ ಕೆಲವೊಬ್ಬರು ಅನಧಿಕೃತವಾಗಿ ಬಿಬಿಎಂಪಿ ಚುನಾವಣೆ ಕುರಿತಾಗಿ ಸಲಹೆ ನೀಡಿದ್ದಾರೆ. ಈಗ ಅಧಿಕೃತವಾಗಿ ಸಲಹೆಗಳನ್ನು ಪಡೆಯಲಾಗುವುದು ಎಂದು ಹೇಳಿದ್ದಾರೆ.

DK Shivakumar

ಡಿಲಿಮಿಟೇಷನ್ ವಿರುದ್ಧ ತಮಿಳುನಾಡಿನಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಮಾತನಾಡಿ, ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ತಮಿಳುನಾಡಿನ ಸಿಎಂ ಆಹ್ವಾನ ನೀಡಿದ್ದರು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಮಾ.22 ರಂದು ತಮಿಳುನಾಡಿನಲ್ಲಿ ನಡೆಯುವ ಸಭೆಗೆ ಭಾಗವಹಿಸಿ ಎಂದು ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿಗಳಿಗೆ ಮೊಣಕಾಲಿನ ನೋವು ಇರುವ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ಅವರು ಬರುತ್ತಿಲ್ಲ. ಪಕ್ಷ ಹಾಗೂ ಸರ್ಕಾರದ ವತಿಯಿಂದ ನಾನು ಸಭೆಯಲ್ಲಿ ಭಾಗವಹಿಸುವೆ. ಪಕ್ಷದ ನಿಲುವನ್ನು ಹೈಕಮಾಂಡ್ ಜೊತೆ ಚರ್ಚಿಸಿ ತಿಳಿಸುವೆ. ದೇಶದಲ್ಲಿ ದೊಡ್ಡ ಪ್ರಮಾಣದ ಚರ್ಚೆ ನಡೆಯುತ್ತಿದೆ. ನಾವುಗಳು ನಮ್ಮ ಹಕ್ಕುಗಳನ್ನು ಹಾಗೂ ಸಂಖ್ಯೆಗಳನ್ನು ಬಿಟ್ಟುಕೊಡಲು ತಯಾರಿಲ್ಲ. ಪಕ್ಷದ ನಿಲುವಿನ ಬಗ್ಗೆ‌ ಬರುವ 18 ರಂದು ಚರ್ಚೆ ನಡೆಸಿ ನಿಲುವನ್ನು ತಿಳಿಸುತ್ತೇವೆ ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net