ದೇವರು, ನ್ಯಾಯಾಲಯದ ಬಗ್ಗೆ ನಂಬಿಕೆಯಿದೆ; ಅಲ್ಲಿಂದ ಏನೇ ಸಿಕ್ಕರೂ ಪ್ರಸಾದ ಎಂದು ಸ್ವೀಕರಿಸುವೆ: ಡಿಕೆಶಿ

ವಿಜಯವಾಣಿ (43)
Published on

ಹಾಸನ: ತಮ್ಮ ವಿರುದ್ದ ಹೈಕೋರ್ಟ್‌ನ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್, ನನಗೆ ದೇವರ ಬಗ್ಗೆ, ನ್ಯಾಯಾಲಯದ ಬಗ್ಗೆ ಅಪಾರ ನಂಬಿಕೆ ಇದೆ. ಅವರು ಏನು ಕೊಟ್ಟರೂ ಅದನ್ನು ನಾನು ಪ್ರಸಾದ ಎಂದು ಸ್ವೀಕಾರ ಮಾಡ್ತೀನಿ ಎಂದರು.

ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ, ಏನು ಆಗಲ್ಲ, ಏನು ಕೊಟ್ಟರೂ ಪ್ರಸಾದವೇ ಎಂದರು. ಇನ್ನು ಸಿಎಂ ವಿರುದ್ದ ಇಂದು ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್‌ ತೀರ್ಪು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಏನು ಮಾಡಿದ್ದಾರೆ ಅಂತ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಸಲಿಗೆ ಏನು ಆಗುವುದಿಲ್ಲ, ಇದು ಅಷ್ಟು ಸುಲಭದ ಕೆಲಸವಲ್ಲ. ಅವರು ಏನಾದರೂ ಸಹಿ ಮಾಡಿ, ತಪ್ಪು ಮಾಡಿದ್ರೆ ಪರವಾಗಿಲ್ಲ. ಜಮೀನು ಕಳೆದುಕೊಂಡಿದ್ದಾರೆ, ಅರ್ಜಿ ಕೊಟ್ಟಿದ್ದಾರೆ. ಬಿಜೆಪಿಯವರು ಅರ್ಜಿ ಪಡೆದೇ ಸೈಟ್ ಕೊಟ್ಟವರೆ, ಅಷ್ಟು ಬಿಟ್ಟರೆ ಇನ್ನೇನಿದೆ? ಇಲ್ಲಿ ಸಿದ್ದರಾಮಯ್ಯನವರ ತಪ್ಪು ಏನಿದೆ? ಎಂದು ಹೇಳಿದರು.

ಇನ್ನು ಸಿದ್ದರಾಮಯ್ಯ ಪುತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನೋಡ್ರಿ ನಾನು ಅವರಿಗೆಲ್ಲಾ, ಆ ನಕಲಿಗೆಳಿಗೆಲ್ಲ ಉತ್ತರಿಸಲು ಬಯಸುವುದಿಲ್ಲ. ಅಸಲಿಯತ್ತು ಇದ್ದರೆ ಮಾತ್ರ ನಾನು ಉತ್ತರ ಕೊಡಲು ಇಚ್ಛಿಸುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಎಚ್​ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net