ಜಿಎಸ್​ಟಿ ಪ್ರವಾಸೋದ್ಯಮವನ್ನು ಕೊಲ್ಲುತ್ತಿದೆ: ಡಿ.ಕೆ.ಶಿವಕುಮಾರ್

DKS
Published on

ಬೆಂಗಳೂರು: ಶೇ.18ಕ್ಕೂ ಹೆಚ್ಚಿನ ಜಿಎಸ್​ಟಿ ಪ್ರವಾಸೋದ್ಯಮವನ್ನು ಕೊಲ್ಲುತ್ತಿದೆ. ದಕ್ಷಿಣ ಭಾರತೀಯರಾದ ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಬ್ಯಾಂಕ್ ಬಡ್ಡಿ ದರ, ಇತರೇ ತೆರಿಗೆಗಳು ಸೇರಿ ಅರ್ಧಕ್ಕೂ ಹೆಚ್ಚು ಹಣ ಕಳೆದುಕೊಂಡರೆ, ಹೂಡಿಕೆದಾರರು ಪ್ರವಾಸೋದ್ಯಮದ ಕಡೆ ಗಮನ ಹರಿಸುವುದಿಲ್ಲ. ಹೀಗಾಗಿ ಹೂಡಿಕದಾರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಹಾಸಂಸ್ಥೆ (ಎಫ್​ಕೆಸಿಸಿಐ) ಮತ್ತು ಪ್ರವಾಸೋದ್ಯಮ ಇಲಾಖೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಉತ್ಸವ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರ ಪ್ರವಾಸೋದ್ಯಮದ ಅಭಿವೃದ್ದಿಗೆ ಬದ್ದವಾಗಿದ್ದು, ಹೆಚ್ಚು ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ನೀತಿಯಿಂದ ಹೆಚ್ಚು ಬಂಡವಾಳ ಹೂಡಿಕೆದಾರರನ್ನು ಸೆಳೆಯಬಹುದು. ಕೈಗಾರಿಕೋದ್ಯಮಿಗಳು ಬಲಗೊಂಡಷ್ಟು ಸರ್ಕಾರ ಬಲಗೊಳ್ಳುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

ಸ್ಕೈ ಡೆಕ್ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್

ಈ ಹಿಂದೆ ಕಬ್ಬನ್ ಪಾರ್ಕ್, ಲಾಲ್​ಬಾಗ್ ಪ್ರವಾಸಿಗರನ್ನು ಸೆಳೆಯುತ್ತಿದ್ದವು. ಇಂದಿನ ಹೊಸ ಪೀಳಿಗೆಗೆ ಹೊಸತನ್ನು ನೀಡಬೇಕಿದೆ. ಈ ಕಾರಣಕ್ಕೆ ಸ್ಕೈ ಡೆಕ್ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದೇವೆ. ಪ್ರಸಿದ್ಧವಾದ ಅನೇಕ ನಗರಗಳಲ್ಲಿ ಎತ್ತರವಾದ ಗೋಪುರಗಳು ಆಕರ್ಷಣೀಯ ಕೇಂದ್ರಗಳಾಗಿವೆ. ಅದರಂತೆ ಬೆಂಗಳೂರಿನಲ್ಲೂ ಇರಲಿ ಎಂದು ಈ ಯೋಜನೆ ಮಾಡಲಾಗಿದೆ. ಮುಂದಿನ 8- 10 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಬೃಂದಾವನ ಉದ್ಯಾನವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುವುದು. ಇದಕ್ಕೆ ಕಳೆದ ಬಜೆಟ್​ನಲ್ಲಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತದೆ ಎಂದು ಊರು ಕಟ್ಟಿದ ಕೆಂಪೇಗೌಡರಿಗೆ ಗೊತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬ್ರಾಂಡ್ ಬೆಂಗಳೂರು ಯೋಜನೆಯಡಿ ಕಸ, ನೀರು, ರಸ್ತೆ, ಮೂಲ ಸೌಕರ್ಯ, ಟ್ರಾಫಿಕ್ ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ.

ಪ್ರವಾಸೋಧ್ಯಮ ಕ್ಷೇತ್ರಕ್ಕೆ ಹೂಡಿಕೆ ಮಾಡುವವರು ತಮ್ಮ ಬೇಡಿಕೆಗಳನ್ನುಲಿಖಿತ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಿ. ನಿಮ್ಮ ಜೊತೆ ಸರ್ಕಾರ ಇರುತ್ತದೆ. ಹೂಡಿಕೆದಾರರಿಗೆ ಕೇವಲ ಸಹಾಯಧನ ನೀಡಿದರೆ ಸಾಲುವುದಿಲ್ಲ. ಉದಾಹರಣೆಗೆ ಕರಾವಳಿ ಪ್ರದೇಶದ ಹೋಟೆಲ್​ಗಳಿಗೆ 10 ವರ್ಷಗಳ ಕಾಲ ಆಸ್ತಿ ತೆರಿಗೆ ವಿನಾಯಿತಿ ನೀಡಿದರೆ ಒಂದಷ್ಟು ಬೆಂಬಲ ನೀಡಿದಂತೆ ಆಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net