

ಬೆಂಗಳೂರು: ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ವಾಲುತ್ತಿದೆ. ನಮ್ಮ ನಡೆ ಅಧಿಕಾರದ ಕಡೆ ಇದೆ ಎಂಬುದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಕಡೆ ಬರುತ್ತಿರುವುದೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿಗೆ ಗುಡ್ಬೈ ಹೇಳಿ, ಎನ್ವೈ ಗೋಪಾಲಕೃಷ್ಣ ಸೋಮವಾರ ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡುತ್ತಾ, ಅನೇಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಆದರೆ ನಮಗೆ ಅವಕಾಶ ಕೊಡಲು ಸಾಧ್ಯವಾಗುತ್ತಿಲ್ಲ. ಕಷ್ಟ ಕಾಲದಲ್ಲಿ ಪಕ್ಷದ ಜತೆಗಿದ್ದ ಯೋಗೀಶ್ ಬಾಬು ಬಗ್ಗೆ ಗಮನದಲ್ಲಿದೆ ಎಂದರು.
ಇದನ್ನೂ ಓದಿ: ಭೀಕರ ಅಪಘಾತ; ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು
ಶಿವಲಿಂಗೇಗೌಡರು ರಾಜಿನಾಮೆ ಕೊಟ್ಟಿದ್ದು, ಪಕ್ಷಕ್ಕೆ ಸೇರಿಸಿಕೊಳ್ಳಲು ಕೋರಿದ್ದಾರೆ. ಅವರಿಗೆ ಅರ್ಜಿ ಹಾಕಲು ಹೇಳಿದ್ದೇವೆ. ಭ್ರಷ್ಟಾಚಾರ ಬೆಲೆ ಏರಿಕೆ ವಿರುದ್ಧ ಜನರು ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಎನ್ವೈ ಹನುಮಂತಪ್ಪ ದಡ್ಡರಲ್ಲ. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಎನ್.ವೈ ಗೋಪಾಲಕೃಷ್ಣ ಮಾತನಾಡಿ, ನನ್ನ ಡಿಪಾಸಿಟ್ ಡಿಕೆಶಿಯವರೇ ಕೊಡಲಿ. ಅವರ ಕೈಗುಣ ಚೆನ್ನಾಗಿದೆ. ಈ ಹಿಂದೆಯೂ ಅವರೇ ಡಿಪಾಸಿಟ್ ಕೊಟ್ಟಿದ್ದರು. ನಾನು ಕೂಡ್ಲಿಗಿಯಲ್ಲಿ ಹಾಗೂ ಮೊಳಕಲ್ಮೂರಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂಬ ಭರವಸೆ ನೀಡಿದರು.
ಡಿ.ಕೆ.ಶಿವಕುಮಾರ್ ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಕಸಾಯಿಖಾನೆಗೆ ಹಸು ಸಾಗಾಣಿಕೆ ವೇಳೆ ವ್ಯಕ್ತಿ ಸಾವು ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಕ್ಷೇತ್ರದಲ್ಲಿ ನೈತಿಕ ಪೊಲೀಸ್ ಗಿರಿಗೆ ಒಂದು ಬಲಿಯಾಗಿದೆ. ಎಫ್ಐಆರ್ ದಾಖಲಾಗಿದ್ದು, ಬಿಜೆಪಿ ಜತೆ ಲಿಂಕ್ ಇರುವವರ ಮೇಲೆ ಪ್ರಕರಣ ದಾಖಲಾಗಿದೆ. ನೈತಿಕ ಪೊಲೀಸ್ ಗಿರಿಗೆ ಸಿಎಂ, ಗೃಹ ಸಚಿವರು ಹೊಣೆ ಹೊರಬೇಕು. ಗೃಹ ಸಚಿವರು ರಾಜೀನಾಮೆ ಕೊಡಲಿ. ಮೃತ ಕುಟುಂಬದವರಿಗೆ ಸರ್ಕಾರ ಕೂಡಲೇ 25 ಲಕ್ಷ ರೂ. ಪರಿಹಾರ ಕೊಡಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು. ನೈತಿಕ ಪೊಲೀಸ್ ಗಿರಿ ಬಗ್ಗೆ ಬೊಮ್ಮಾಯಿಯವರ ಹಿಂದಿನ ಹೇಳಿಕೆಯನ್ನು ನೆನಪು ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.