ಡಿಕೆಶಿ ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ|Misusing AICC

K N rajanna
Published on

ಬೆಂಗಳೂರು: ನಾವು ಸಿಎಂ ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಆದರೆ, ಅವರೇ (ಡಿಕೆಶಿ) ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ(DK Shivakumar is misusing the name of AICC) ಎಂದು ಸಹಕಾರ ಸಚಿವ ರಾಜಣ್ಣ (Rajanna)ಖಡಕ್ ತಿರುಗೇಟು ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಅವರೂ ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್ ಆಂತರಿಕ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸುಳಿವು ನೀಡಿದರು.

ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನು ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪ ಅಲ್ಲ, ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ ಎಂದು ರಾಜಣ್ಣ ಹೇಳಿದರು.

50 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಸತ್ಪರಿಣಾಮ ಬೀರುವಂಥ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವಂತಹ ಮಾತುಗಳನ್ನು ಆಡುವುದಿಲ್ಲ. ನನಗೂ ಡಿಕೆ ಶಿವಕುಮಾರ್‌ಗೂ ವೈಯುಕ್ತಿಕವಾಗಿ ಏನೂ ಇಲ್ಲ. ಅಭಿಪ್ರಾಯ ಬೇಧ ಇರಬಹುದು ಅಷ್ಟೆ. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಎಲ್ಲ ಮಾಡಿದ್ದೇವೆ. ನಮ್ಮ ಮಧ್ಯೆ ವೈಯುಕ್ತಿಕವಾಗಿ ಏನೂ ಇಲ್ಲ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದು ರಾಜಣ್ಣ ಹೇಳಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಹೈಕಮಾಂಡ್ ಏಕಪಕ್ಷೀಯವಾಗಿ ಯಾವ ನಿರ್ಧಾರವನ್ನೂ ಮಾಡುವುದಿಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲೇಬೇಕು ಎಂದು ಆಗ್ರಹಿಸಿದರು.

ಜಿಸಿ ಚಂದ್ರಶೇಖರ್ ಯಾರು?

ಜಿ.ಸಿ.ಚಂದ್ರಶೇಖರ್ ಯಾರು?, ಅವರ ಮಾತಿಗೆ ಯಾಕಿಷ್ಟು ಮನ್ನಣೆ? ಅವರ ಶಕ್ತಿ ಏನಿದೆ? ಶಕ್ತಿ ಮೀರಿ ಅಧಿಕಾರ ಅನುಭವಿಸುತ್ತಿದ್ದಾರೆ. 2 ಬಾರಿ ಎಂಪಿ, ಪಾರ್ಟಿಗೆ ಏನು ಶಕ್ತಿ ಕೊಟ್ಟಿದ್ದಾರೆ? ಅವರು ಏನು, ಎತ್ತ ಅಂತಾ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಆಮೇಲೆ ಅವರು ಮಾತನಾಡಬೇಕು.

ಕಾರ್ಪೋರೇಷನ್ ಎಲೆಕ್ಷನ್‌ನಲ್ಲಿ ಎಷ್ಟು ವೋಟು ತೆಗೆದುಕೊಂಡಿದ್ದರು? ಕಾರ್ಯಾಧ್ಯಕ್ಷರಾದರೆ ಎರಡು ಕೊಂಬು ಇರುತ್ತಾ? ಶಿಶುಪಾಲ ಅವರೇ, ನಾನು ಶ್ರೀಕೃಷ್ಣ ಎಂದು ರಾಜಣ್ಣ ವಾಗ್ದಾಳಿ ನಡೆಸಿದರು.

ಡಿಕೆಶಿ ಹೇಳಿದ್ದೇನು?

ಸಿದ್ದರಾಮಯ್ಯನವರು ನಮ್ಮ ನಾಯಕ. ಅವರು ಎಲ್ಲ ಚುನಾವಣೆಗೂ ಬೇಕು. ಜಿಲ್ಲಾ ಪಂಚಾಯಿತಿಗೂ ಬೇಕು, ತಾಲೂಕು ಪಂಚಾಯಿತಿಗೂ ಬೇಕು, ಅಸೆಂಬ್ಲಿಗೂ ಬೇಕು, ಪಾರ್ಲಿಮೆಂಟಿಗೂ ಬೇಕು. ಅವರು ಕಾಂಗ್ರೆಸ್ ನಾಯಕ. ಅವರನ್ನು ಕಾಂಗ್ರೆಸ್ ಪಕ್ಷ 2 ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದಿನಾ ಬೆಳಗ್ಗೆ ಎದ್ದು ಅವರ ಹೆಸರು ಹೇಳಿಕೊಂಡು ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಅದರ ಅವಶ್ಯಕತೆಯೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net