ಡಿಕೆ ಬ್ರದರ್ಸ್ ಮಾಜಿ ಸಿಎಂ ಎಚ್​ಡಿಕೆಗೆ ತೊಂದರೆ ನೀಡ್ತಿದ್ದಾರೆ: ಸಿ.ಪಿ. ಯೋಗೀಶ್ವರ್​ ಸ್ಪೋಟಕ ಹೇಳಿಕೆ

CPY
Published on

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು​ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಸಿ.ಪಿ. ಯೋಗೀಶ್ವರ್​ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್​ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ನಮ್ಮ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡ್ತಿದ್ದಾರೆ.‌ ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಹಾಗೂ ನಮ್ಮ‌ ಪಕ್ಷದ ಜತೆಗೆ ಬನ್ನಿ ಎಂದು ಬಹಿರಂಗವಾಗೇ ಆಹ್ವಾನ ನೀಡಿದರು.

ಕುಮಾರಸ್ವಾಮಿ ಡಿಕೆ ಬ್ರದರ್ಸ್​ಗೆ ಹೆದರುತ್ತಾರೆ ಎಂದು ನನಗನಿಸಿಲ್ಲ. ‌ಡಿಕೆಶಿ ಮತ್ತು ಕುಮಾರಸ್ವಾಮಿ ಅವರ ನಡುವೆ ಅಂತರ ಯುದ್ಧ ಶುರುವಾಗಿದೆ. ಡಿಕೆಶಿ ಹಾಗೂ ಎಚ್​ಡಿಕೆ ಇಬ್ಬರು ಕಿತ್ತಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರ ಮಾತು‌ ನಡೀತಾ ಇದೆ. ಜೆಡಿಎಸ್​ ಹಾಗೂ ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ನಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡ್ತಿದ್ದೇನೆ ಎಂದರು.

ಡಿಕೆಶಿ ಸಹೋದರರು ಕುಮಾರಸ್ವಾಮಿಗೆ ತೊಂದರೆ ಮಾಡ್ತಾ ಇದ್ದಾರೆ. ರಾಮನಗರದಲ್ಲಿ ಜೆಡಿಎಸ್​ನವರನ್ನು ಕಾಂಗ್ರೆಸ್ ಸೆಳೆಯುತ್ತಿದೆ. ಇನ್ನೊಂದೆಡೆ ಕುಮಾರಸ್ವಾಮಿ ಅವರು ನಮ್ಮ ಸರ್ಕಾರದಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ರಾಜ್ಯ ಸಭೆ ಆಯ್ಕೆ ವಿಚಾರದಲ್ಲಿ ಕುಮಾರಸ್ವಾಮಿ ಸಹಕಾರ ನೀಡಿದರು. ಹೀಗಾಗಿ ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿ ಜತೆ ಕೈಜೋಡಿಸಲು ನಾನು ಮನವಿ ಮಾಡ್ತೇನೆ. ಕುಮಾರಸ್ವಾಮಿ ಏನು ಡಿಕೆಶಿಗೆ ಹೆದರಲ್ಲ. ಈ ಹಿಂದೆ ಡಿಕೆಶಿ ಎಚ್​ಡಿಕೆ ಒಟ್ಟಿಗೆ ಕೈ ಜೋಡಿಸಿದ್ರು. ಈಗ ಪರಸ್ಪರ ಕಿತ್ತಾಟ ಮಾಡ್ತಿದ್ದಾರೆ ಎಂದು ಹೊಸ ಬಾಂಬ್​ ಹಾಕಿದರು.

ಸಿಪಿವೈ ಹೇಳಿಕೆಗೆ ಡಿಕೆಶಿ ಮತ್ತು ಎಚ್​ಡಿಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಇದೇ ವೇಳೆ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ.‌ ನನ್ನ ಕಾಲೆಳೆಯುವ ಯತ್ನ ಮಾಡಬೇಡಿ ಎಂದು ಮಾಧ್ಯಮದವರಲ್ಲಿ ವಿನಂತಿಸಿಕೊಂಡರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net