

ಬೆಂಗಳೂರು: ಆರ್ಥಿಕ ಉದಾರೀಕರಣದ ಹರಿಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ವಿಧಿವಶರಾಗಿದ್ದು ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. 2004-2014ರಿಂದ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವರು 1991-96ರವರೆಗೆ ಪಿವಿ ನರಸಿಂಹರಾವ್ ಅವರ ಸಚಿವಸಂಪುಟದಲ್ಲಿ ವಿತ್ತ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಭಾರತದ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ ಸಿಂಗ್ ಅವರು ವಿಶ್ವದ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಜಾಗತೀಕರಣ, ಉದಾರೀಕರಣ, ಆರ್ಥಿಕ ನೀತಿಗಳು, ಆಡಳಿತದಲ್ಲಿ ಶಿಸ್ತು ಭಾರತವನ್ನು ಆರ್ಥಿಕವಾಗಿ ಸದೃಢವಾಗಿಸಲು ಕಾರಣವಾಯಿತು.
ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆ, (RTI) ಶಿಕ್ಷಣ ಹಕ್ಕು ಕಾಯ್ದೆ (RTE), ಆಹಾರ ಭದ್ರತಾ ಕಾಯ್ದೆ ಮುಂತಾದವುಗಳು, ಆಧಾರ ಕಾರ್ಡ್ ವಿಶಿಷ್ಟ ಗುರುತಿನ ಚೀಟಿಯ ಯೋಜನೆ ಹೀಗೆ ಹತ್ತು, ಹಲವು ಕಾಯ್ದೆ ಮತ್ತು ಯೋಜನೆಗಳು ವಿಶ್ವಕ್ಕೇ ಮಾದರಿಯಾಗಿವೆ. ಭವಿಷ್ಯದ ಪೀಳಿಗೆಗೆ ಅವರ ಆರ್ಥಿಕ ನೀತಿಗಳನ್ನು, ದೇಶ ಸುಧಾರಣಾ ಕ್ರಮಗಳನ್ನು ತಿಳಿಸಿಕೊಡಬೇಕಿದೆ. ದಿ.ಡಾ. ಮನಮೋಹನ ಸಿಂಗ್ ಹಾಗೂ ಅವರ ಆಡಳಿತ ಮತ್ತು ಆರ್ಥಿಕ ನೀತಿಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಿದೆ.
ದಿವಂಗತ ಡಾ. ಮನಮೋಹನ ಸಿಂಗ್ ಅವರ ಗೌರವಾರ್ಥ ಹಾಗೂ ಸ್ಮರಣಾರ್ಥ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ, ಸಂಶೋಧನಾ ಕೇಂದ್ರ ತೆರೆದು ಅವರ ಯೋಜನೆಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೆ ತಲುಪುವಂತೆ ಮಾಡಲು ಅವುಗಳ ಬಗ್ಗೆ ಅಧ್ಯಯನ ಮಾಡಿ, ಸಂಶೋಧನೆ ಮಾಡಿ ದಾಖಲಾತಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ಈ ಮೂಲಕ ಸೂಚಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಉಲ್ಲೇಖಿಸಿದ್ದಾರೆ.