ಡಿಕೆ- ಎಚ್‌ಡಿಕೆ ಸಮರಕ್ಕೆ ಅಧಿವೇಶನವೇ ಅಖಾಡ!

HDK vs DKS
Published on

ಬೆಂಗಳೂರು: ಮುಂಬರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನವೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನಡುವಿನ ಚರ್ಚಾ ಸಮರಕ್ಕೆ ವೇದಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್,

ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆ ಮಾಡೋಣ, ಅವರ ಸವಾಲು ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ ನನ್ನ ಸವಾಲು ಸ್ವೀಕಾರ ಮಾಡಿರುವುದು ಬಹಳ ಸಂತೋಷ. ಅವರ ಪ್ರತಿ ಸವಾಲನ್ನು ನಾನು ಸ್ವೀಕರಿಸುವೆ. ನಮ್ಮ ಚರ್ಚೆ ಯಾವುದೋ ಒಂದು ಚಾನೆಲ್ ನಲ್ಲಿ ಆಗೋದು ಬೇಡ. ಎಲ್ಲಾ ಸುದ್ದಿ ವಾಹಿನಿಗಳಿಗೂ ಸಿಗುವಂತೆ ಅಧಿವೇಶನದಲ್ಲೇ ಚರ್ಚೆ ಮಾಡೋಣ. ಯಾರು ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಅಧಿವೇಶನದಲ್ಲಿ ಬಿಚ್ಚಿಡೋಣ. ಅವರ ಬಳಿ ಇರುವ ಸರಕುಗಳನ್ನು ತಂದು ಅವರು ಮಾತನಾಡಲಿ. ನನ್ನ ಬಳಿ ಇರುವ ದಾಖಲೆಗಳನ್ನು ಮುಂದಿಟ್ಟು ನಾನು ಮಾತನಾಡುತ್ತೇನೆ ಎಂದರು.

ಈ ಹಿಂದೆಯೂ ನಾನು ಇಂತಹ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿ, ಉತ್ತರ ಕೊಟ್ಟಿದ್ದೇನೆ. ನಂತರ ನನ್ನ ಬಳಿ ಬಂದು ಕ್ಷಮೆ ಕೇಳಿದ್ದನ್ನು ನೋಡಿದ್ದೇವೆ ಎಂದು ತಿಳಿಸಿದರು.

ವಿಧಾನಸೌಧ ಕಚೇರಿ ನವೀಕರಣ ಅಗತ್ಯತೆ ಬಗ್ಗೆ ಬಿಜೆಪಿ ಮಾಡಿರುವ ಟೀಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಬಿಜೆಪಿಗೆ ಸಾಮಾನ್ಯ ಜ್ಞಾನ ಇಲ್ಲ. ಅದು ನನ್ನ ಕಚೇರಿ. ನಾನು ಅಲ್ಲಿ ಅನೇಕ ಜನರು, ಗಣ್ಯರನ್ನು ಭೇಟಿ ಮಾಡಬೇಕಾಗುತ್ತದೆ. ನೆದರ್ ಲ್ಯಾಂಡ್ ಪ್ರಧಾನಮಂತ್ರಿಗಳು ವಿಧಾನಸೌಧಕ್ಕೆ ಬಂದಾಗ ನಾನು ಎಂ.ಬಿ. ಪಾಟೀಲ್ ಅವರ ಕೊಠಡಿಗೆ ಹೋಗಿ ಅವರನ್ನು ಭೇಟಿ ಮಾಡಬೇಕಾಯಿತು. ಗಣ್ಯರು ಭೇಟಿಗೆ ಬಂದಾಗ ಅವರಿಗೆ ಗೌರವ ನೀಡಲು ಅಚ್ಚುಕಟ್ಟಾದ ಕೊಠಡಿ, ಸೂಕ್ತ ಸ್ಥಳಾವಕಾಶ ಇರಬೇಕು. ನಾವು ನಮ್ಮ ಮಣ್ಣಿನ ಸಂಸ್ಕೃತಿ ಪಾಲಿಸಬೇಕು. ನಾವು ಬೆಂಗಳೂರು ಹಾಗೂ ಇಂಡಿಯಾವನ್ನು ಉತ್ತಮವಾಗಿ ಬಿಂಬಿಸಬೇಕು. ಅದಕ್ಕಾಗಿ ಮಾಡುತ್ತಿದ್ದೇವೆ. ಬಿಜೆಪಿ ಅವರಿಗೆ ಈ ಬಗ್ಗೆ ಕಾಮನ್ ಸೆನ್ಸ್ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net