ಡಿಜೆ ಬಳಕೆ ಗಣೇಶ ಮಂಡಳಿಗಳ ವಿವೇಚನೆಗೆ

24 LXR 1
Published on

ಲಕ್ಷ್ಮೇಶ್ವರ: ಗಣೇಶೋತ್ಸವ ಮತ್ತು ಈದ್ ಮಿಲಾದ್ ವೇಳೆ ನಿಯಮ ಮೀರಿ ಯಾರೇ ನಡೆದುಕೊಂಡರೂ ಕಾನೂನು ಕ್ರಮ ಜರುಗಿಸಲಾಗುವುದು. ಮೆರವಣಿಗೆ ವೇಳೆ ಡಿ.ಜೆ ಬಳಸುವ ಬಗ್ಗೆ ಗಣೇಶ ಮಹಾಮಂಡಗಳೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೂಚ್ಯವಾಗಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸಬೇಕು. ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿ, ಸೌರ್ಹಾರ್ದದಿಂದ ನಡೆಸಬೇಕು. ಶಾಂತಿಗೆ ಭಂಗ ತಂದು ಪೊಲೀಸರಿಗೆ ಕೆಲಸ ನೀಡಬೇಡಿ ಎಂದು ಹೇಳಿದರು.
ಪ್ರತಿವರ್ಷ ಪೂರ್ವಭಾವಿ ಸಭೆ ಸೇರುವ ಸಂಪ್ರದಾಯ ಕಡಿಮೆಯಾಗಲಿ. ಅದರ ಬದಲು ಸೌಹಾರ್ದ ಸಭೆಗಳು ನಡೆಯುವಂತಾಗಲಿ. ಆಗಲೇ ಶಾಂತಿ ಎನ್ನುವ ಪದಕ್ಕೆ ಅರ್ಥ ಬರುತ್ತದೆ. ಎಲ್ಲ ಗಣೇಶ ಮಂಡಳಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಆಯಾ ಪ್ರದೇಶದ ಜನಪ್ರತಿನಿಧಿಗಳು, ಹಿರಿಯರೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕವಾಗಿವೆ. ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಧಕ್ಕೆ ಬರದಂತೆ ಹಬ್ಬಗಳನ್ನು ಆಚರಿಸಬೇಕಿದೆ. ಈ ಕುರಿತು ರೂಪಿಸಲಾಗಿರುವ ನಿಯಮ ಪಾಲಿಸುವುದು ಅಗತ್ಯವಾಗಿದ್ದು, ಎಲ್ಲರೂ ಸಹಕಾರದಿಂದ ಹಬ್ಬ ಆಚರಿಸೋಣ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ ಡಿ.ಎಚ್. ಇನಾಮದಾರ, ತಾಪಂ ಇಒ ಕೃಷ್ಣಪ್ಪ ಧರ್ಮರ, ಸಿಪಿಐ ನಾಗರಾಜ ಮಾಡಳ್ಳಿ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net