

ಬೆಂಗಳೂರು: ಧಾರ್ವಿುಕ ಭಾವನೆಗೆ ಧಕ್ಕೆಯುಂಟು ಮಾಡುವ ಫೇಸ್ಬುಕ್ ಪೋಸ್ಟ್ ನೆಪದಲ್ಲಿ ಸೃಷ್ಟಿಯಾದ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ಪೊಲೀಸರ ತನಿಖೆ ಮುಂದುವರಿದಂತೆ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ. ದೊಡ್ಡಮಟ್ಟದ ಗಲಭೆ ಸೃಷ್ಟಿಸಲು 7 ದಿನಗಳ ಮುನ್ನವೇ ಫೇಸ್ಬುಕ್ನಲ್ಲೇ ಸ್ಕೆಚ್ ಸಿದ್ಧವಾಗಿತ್ತು ಎಂಬ ವಿಚಾರ ಈಗ ಬಹಿರಂಗವಾಗಿದೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರಳಿಯ ನವೀನ್ ಹಾಗೂ ಬಂಧಿತ ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಸಹಚರರ ನಡುವೆ ಆ.4ರಿಂದಲೇ ಫೇಸ್ಬುಕ್ನಲ್ಲಿ ರಾಜಕೀಯ ಹಾಗೂ ಧಾರ್ವಿುಕ ವಿಚಾರವಾಗಿ ಜಟಾಪಟಿ ಶುರುವಾ ಗಿತ್ತು. ಆ.11ರ ವೇಳೆಗೆ ಅತಿರೇಕಕ್ಕೆ ಹೋಗಿ ಗಲಭೆಯ ಸ್ವರೂಪ ಪಡೆದಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಟಿಪ್ಪು ಸುಲ್ತಾನ್, ಕಾಂಗ್ರೆಸ್ ಪಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಹೀಗೆ ಹಲವು ವಿಚಾರಗಳ ಕುರಿತು ನವೀನ್ ಫೇಸ್ಬುಕ್ನಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದ. ಈ ಪೋಸ್ಟ್ಗಳಿಗೆ ಸ್ಥಳೀಯರಿಂದ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿ, ಆಗಾಗ ಜಟಾಪಟಿ ನಡೆಯುತ್ತಿತ್ತು. ಧಾರ್ವಿುಕ ಭಾವನೆಗೆ ಧಕ್ಕೆಯುಂಟು ಮಾಡುವಂಥ ಪೋಸ್ಟ್ ಅಪ್ಲೋಡ್ ಮಾಡಿದ ವಿಚಾರಕ್ಕೆ ಆ.4ರಂದೇ ಗಲಾಟೆ ಶುರುವಾಗಿತ್ತು. ಆ.11ರಂದು ಮುಜಾಮಿಲ್ ಪಾಷಾ ಕಡೆಯವರೂ ಜಾಲತಾಣದಲ್ಲಿ ಧಾರ್ವಿುಕ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ್ದರು. ಇದಕ್ಕೆ ಎಂದಿನಂತೆ ಅವರ ಪೋಸ್ಟ್ಗಳಿಗೆ ನವೀನ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದ.
ಆ.11ರಂದು ಸಂಜೆ 5.30ರಲ್ಲಿಯೂ ಬೇರೆಯವರು ಅಪ್ಲೋಡ್
ಮಾಡಿದ್ದ ಧಾರ್ವಿುಕ ಅವಹೇಳನಕಾರಿ ಪೋಸ್ಟ್ಗೆ ಕಾಮೆಂಟ್ ಬಾಕ್ಸ್ ನಲ್ಲಿ ಮತ್ತೊಂದು ಪೋಸ್ಟ್ ಹಾಕುವ ಮೂಲಕ ನವೀನ್ ಪ್ರತಿಕ್ರಿಯಿಸಿದ್ದ. ಆದರೆ, ಫೇಸ್ಬುಕ್ನಲ್ಲಿ ಮೊದಲು ಅಪ್ಲೋಡ್ ಮಾಡಿದ್ದ ಮೂಲ ಪೋಸ್ಟ್ ಅಳಿಸಿ ಹಾಕಿ, ಆ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಕಾಮೆಂಟ್ ಬಾಕ್ಸ್ನಲ್ಲಿ ನವೀನ್ ಹಾಕಿದ್ದ ಪೋಸ್ಟ್ ಅನ್ನು ಮಾತ್ರ ವೈರಲ್ ಮಾಡಲಾಗಿತ್ತು. ಇದನ್ನೇ ನೆಪವಾಗಿರಿಸಿಕೊಂಡು ಶಾಸಕ ಅಖಂಡ ಶ್ರೀನಿವಾಸ್ವುೂರ್ತಿ ಮನೆ, ಕೆ.ಜಿ.ಹಳ್ಳಿ ಹಾಗೂ ಡಿ.ಜೆ ಹಳ್ಳಿ ಠಾಣೆಗಳಿಗೆ ಬೆಂಕಿಹಚ್ಚಿ ಗಲಭೆ ಸೃಷ್ಟಿಸಲಾಗಿದೆ ಎಂಬುದು ಈವರೆಗಿನ ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವೀನ್ ಮೊಬೈಲ್ ಪತ್ತೆ
ಬಂಧಿತ ಆರೋಪಿ ನವೀನ್ ಬಳಸುತ್ತಿದ್ದ ಮೊಬೈಲ್ ಆತನ ಮನೆಯಲ್ಲೇ ಪತ್ತೆಯಾಗಿದೆ. ವಿಚಾರಣೆ ವೇಳೆ ಮೊಬೈಲ್ ಬಗ್ಗೆ ನೀಡಿದ್ದ ಸುಳಿವಿನ ಮೇರೆಗೆ, ಶನಿವಾರ ಬೆಳಗ್ಗೆ 7.30ರಲ್ಲಿ ನವೀನ್ನನ್ನು ಡಿ.ಜೆ.ಹಳ್ಳಿಯಲ್ಲಿರುವ ನಿವಾಸಕ್ಕೆ ಕರೆದೊಯ್ದು ಮಹಜರು ಮಾಡಿಸಲಾಯಿತು. ಗಲಭೆ ದಿನ ಮನೆಗೆ ಹೋದಾಗ ಜೇಬಿನಿಂದ ಬಿದ್ದಿರಬೇಕು ಎಂದು ಹೇಳಿಕೆ ನೀಡಿದ್ದಾನೆ. ಕಾಮೆಂಟ್ ಬಾಕ್ಸ್ನಲ್ಲಿ ಪೋಸ್ಟ್ ಪ್ರಕಟಿಸಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಹಿಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದವರಿಗೆ ಪ್ರತಿಕ್ರಿಯಿಸುತ್ತಿದ್ದೆ. ಇಷ್ಟು ದೊಡ್ಡ ಗಲಭೆಗೆ ಕಾರಣವಾಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ನವೀನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಕಾಪೋರೇಟರ್ ಪತಿ ಬಳಿ ಎರಡು ಮೊಬೈಲ್
ನಾಗವಾರ ವಾರ್ಡ್ ಕಾಪೋರೇಟರ್ ಇರ್ಷಾದ್ ಬೇಗಂ ಪತಿ ಬಂಧಿತ ಆರೋಪಿ ಖಲೀಲ್ ಪಾಷಾ ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ. ವೈಯಕ್ತಿಕ ಬಳಕೆಗೆ ಒಂದು ಮೊಬೈಲ್ ಹಾಗೂ ಯುವಕರ ಜೊತೆ ಸಂವಹನ ನಡೆಸಲು ಮತ್ತೊಂದು ಮೊಬೈಲ್ ಇಟ್ಟುಕೊಂಡಿದ್ದ. ಎರಡನೇ ಮೊಬೈಲ್ನಲ್ಲಿದ್ದ ನಂಬರ್ಅನ್ನು ಯುವಕರು ಖಲೀಲ್ ಪಾಷಾ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದರು. ಗಲಭೆ ದಿನ ಬಳಸಿದ್ದ ಮೊಬೈಲ್ ಅನ್ನು ಬಚ್ಚಿಟ್ಟಿದ್ದಾನೆ. ಈ ಬಗ್ಗೆ ಖಲೀಲ್ ಅಸ್ಪಷ್ಟ ಉತ್ತರಗಳನ್ನು ನೀಡುತ್ತಿದ್ದಾನೆ. ಮೊಬೈಲ್ ಪತ್ತೆಯಾದರೆ, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಅಚ್ಚರಿಯ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಆರೋಪಿಗಳ ಫೋನ್ ಎಫ್ಎಸ್ಎಲ್ಗೆ ರವಾನೆ
ಗಲಭೆಯಲ್ಲಿ ಪಾಲ್ಗೊಂಡಿರುವ ಸಾಕ್ಷ್ಯಾಧಾರಗಳು ಲಭ್ಯವಿದ್ದರೂ ‘ಗಲಭೆಗೂ ಎಸ್ಡಿಪಿಐಗೂ ಸಂಬಂಧವಿಲ್ಲ. ನಮಗೆ ಅನ್ಯಾಯ ವಾಗಿತ್ತು, ಅದಕ್ಕೆ ಹೋಗಿರುವುದಾಗಿ’ ಮುಜಾಮಿಲ್ ಪಾಷಾ ವಾದಿಸುತ್ತಿದ್ದಾನೆ. ಗಲಭೆ ಬಳಿಕ ಕೆಲವರು ಮೊಬೈಲ್ನಲ್ಲಿರುವ ಡೇಟಾ ಅಳಿಸಿ ಹಾಕಿದ್ದಾರೆ. ಹೀಗಾಗಿ, ಆರೋಪಿಗಳ ಮೊಬೈಲ್ಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವು ವ್ಯಾಟ್ಸ್ಆಪ್ ಗ್ರೂಪ್
ಧಾರ್ವಿುಕ ಭಾವನೆಗಳಿಂದ ಯುವಕರನ್ನು ಸೆಳೆದು ಸಂಘಟಿಸಿದ್ದ ಖಲೀಂ, ‘ಸಂದರ್ಭ ಬಂದರೆ ತಾನು ಕರೆದಲ್ಲಿಗೆ ಬರಬೇಕು’ ಎಂದು ಸೂಚಿಸಿದ್ದ. ನಾಲ್ಕೈದು ತಿಂಗಳಿಂದ ಈ ಕಾರ್ಯದಲ್ಲಿ ನಿರತರಾಗಿದ್ದರು. ಸಂಕಷ್ಟದಲ್ಲಿದ್ದ ಯುವಕರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಯುವಕರ ಜತೆ ಸಂವಹನ ನಡೆಸಲು ಏಳೆಂಟು ವ್ಯಾಟ್ಸ್ಆಪ್ ಗ್ರೂಪ್ ರಚಿಸಿಕೊಂಡಿದ್ದು, ಮುಜಾಮಿಲ್ ಪಾಷಾ, ಅಫ್ನಾನ್, ಫೈರೋಜ್, ಅಬ್ಬಾಸ್ ಮತ್ತಿತರು ಸಕ್ರಿಯ ಸದಸ್ಯರಾಗಿದ್ದರು. 250ರಿಂದ 300ಕ್ಕೂ ಹೆಚ್ಚು ಯುವಕರು ಗ್ರೂಪ್ನಲ್ಲಿ ಸೇರ್ಪಡೆಯಾಗಿದ್ದು, ಗಲಭೆ ಬಳಿಕ ಬಹುತೇಕರು ಗ್ರೂಪ್ನಿಂದ ಹೊರಹೋಗಿದ್ದಾರೆ.
ಹತ್ತು ನಿಮಿಷದೊಳಗೆ ಠಾಣೆಗೆ ಬರುವಂತೆ ಸಂದೇಶ
ಆ.11ರಂದು ಸಂಜೆ 7 ಗಂಟೆಯಲ್ಲಿ ನವೀನ್ ವಿರುದ್ಧ ದೂರು ಕೊಡಲು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದರು. 7.30 ರಿಂದ 7.45ರ ಅವಧಿಯಲ್ಲಿಯೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ, ದೂರು ಕೊಡಲು ಹೋಗಿದ್ದವರು, ನವೀನ್ನನ್ನು ತಮಗೆ ಹಸ್ತಾಂತರಿಸುವಂತೆ ಪಟ್ಟು ಹಿಡಿದಿದ್ದರು. ಪರಿಸ್ಥಿತಿಯನ್ನು ಅರಿತಿದ್ದ ಪೊಲೀಸರು ನವೀನ್ನನ್ನು ಬಂಧಿಸಿ, ಕೆ.ಜಿ.ಹಳ್ಳಿ ಠಾಣೆಗೆ ಕರೆದೊಯ್ದು ಇಟ್ಟಿದ್ದರು. ಈ ವೇಳೆ ಮುಜಾಮಿಲ್ ಪಾಷಾ ವಾಟ್ಸ್ ಆಪ್ ಗ್ರೂಪ್ನಲ್ಲಿ, ‘10 ನಿಮಿಷದೊಳಗೆ ಠಾಣೆ ಬಳಿ ಜಮಾವಣೆಯಾಗುವಂತೆ ಯುವಕರಿಗೆ ಸೂಚಿಸಿದ್ದ. ಗ್ರೂಪಿನಲ್ಲಿದ್ದ ಎಲ್ಲ ಸದಸ್ಯರು ಓಕೆ’ ಎಂದು ಪ್ರತಿಕ್ರಿಯಿಸಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ನೂರಾರು ಯುವಕರ ಗುಂಪು ಠಾಣೆ ಮುಂದೆ ಜಮಾಯಿಸಿತ್ತು.