

ಶಿವಮೊಗ್ಗ: ವರುಣನ ಆತಂಕದ ನಡುವೆಯೂ ಈ ಬಾರಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಜಿಲ್ಲಾದ್ಯಂತ ಸಡಗರ ಸಂಭ್ರಮ ಹೆಚ್ಚಾಗಿದೆ. ಮಾರುಕಟ್ಟೆಗಳಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರ ವಸ್ತುಗಳ ಖರೀದಿ ಭರಾಟೆ ಸೋಮವಾರ ಜೋರಾಗಿತ್ತು.
ಆಕಾಶಬುಟ್ಟಿ, ಬಾಳೆ ಕಂದು, ಕಬ್ಬು, ಚೆಂಡಿನ ಹೂವು, ಸೇವಂತಿಗೆ, ಕಾಕಡ ಮುಂತಾದ ಹೂವುಗಳ ಖರೀದಿ ಜೋರಾಗಿತ್ತು. ದೀಪಾವಳಿ ಸಂಭ್ರಮಕ್ಕಾಗಿ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಹಬ್ಬದ ಆಚರಣೆಗೆ ಶಿವಮೊಗ್ಗ ನಗರ ಸೇರಿ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿತ್ತು.
ಶಿವಮೊಗ್ಗದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಗಾಂಧಿಬಜಾರ್, ನೆಹರು ರಸ್ತೆ, ಬಿ.ಎಚ್.ರಸ್ತೆ, ದುರ್ಗಿಗುಡಿ, ಟಿ.ಸೀನಪ್ಪ ಶೆಟ್ಟಿ ವೃತ್ತ, ಮಹಾನಗರ ಪಾಲಿಕೆ ಎದುರು, ಸವಳಂಗ ರಸ್ತೆ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ ಸೇರಿ ಹಲವೆಡೆ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆ ಎಲೆ, ಬಾಳೆಕಂದುಗಳ ವ್ಯಾಪಾರ ಜೋರಾಗಿತ್ತು.
ಮತ್ತೊಂದೆಡೆ ಬೆಳಕಿನ ಹಬ್ಬಕ್ಕೆ ಮೆರುಗು ನೀಡುವ ಹಣತೆಗಳ ಮಾರಾಟವೂ ಜೋರಾಗಿತ್ತು. ಜಿಲ್ಲೆಯ ವಿವಿಧೆಡೆ ತರಹೇವಾರಿ ಹಣತೆಗಳು ಮಾರಾಟಕ್ಕಿಡಲಾಗಿದೆ. ಕೆಲವಡೆ ಸಣ್ಣ ಹಣತೆಗಳು 30 ರೂ. ಡಜನ್ ಹಾಗೂ ದೊಡ್ಡ ಹಣತೆಗಳನ್ನು 50 ರೂ.ಗೆ ಮಾರಾಟ ಮಾಡಲಾಯಿತು.
ಈ ಸಲವೂ ಎರಡು ದಿನ ಲಕ್ಷ್ಮೀ ಪೂಜೆ
ಅಮವಾಸ್ಯೆ ಎರಡು ದಿನ ಇರುವುದಿಂದ ಈ ಬಾರಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಲಕ್ಷ್ಮೀ ಪೂಜೆ ನೆರವೇರಲಿದೆ. ಇದಕ್ಕಾಗಿ ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ಹೂವು ಹಣ್ಣು ಸೇರಿ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಸೋಮವಾರ ಸಂಜೆಯೇ ಅಂಗಡಿಮುಂಗಟ್ಟು, ಪೆಟ್ರೋಲ್ ಬಂಕ್‌ಗಳು, ಕೈಗಾರಿಕೆಗಳು ಸೇರಿ ಮನೆಗಳಲ್ಲೂ ಜನರು ಲಕ್ಷ್ಮೀಪೂಜೆ ನೆರವೇರಿಸಿದರು. ಅದಕ್ಕಾಗಿ ಅಂಗಡಿ - ಮುಂಗಟ್ಟುಗಳನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು ಅಲಂಕಾರಗೊಳಿಸಿದ್ದರು.