Ayodhya Deepotsav: ಒಂದೆಡೆ ಲಕ್ಷಾಂತರ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಅಯೋಧ್ಯೆ, ಇನ್ನೊಂದೆಡೆ ಗಿನ್ನಿಸ್ ದಾಖಲೆಯ ಸಡಗರ. ಸರಯೂ ನದಿ ತೀರದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯೋ 'ದೀಪೋತ್ಸವ'ದ ಬೆನ್ನಲ್ಲೇ, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋ ಜನರ ಕಣ್ಣು ಒದ್ದೆ ಮಾಡುತ್ತಿದೆ.
ದೀಪೋತ್ಸವ ಮುಗಿದು ದೀಪಗಳು ಆರಿದ ನಂತರ, ಸ್ಥಳೀಯ ಬಡ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳು ಘಾಟ್ಗಳಿಗೆ ಆಗಮಿಸಿ ದೀಪಗಳಲ್ಲಿ ಹಾಗೂ ನೆಲದ ಮೇಲೆ ಬಿದ್ದಿರುವ ಎಣ್ಣೆಯನ್ನು ಬಾಟಲಿ ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಗಿನ್ನಿಸ್ ದಾಖಲೆಗಾಗಿ ದೀಪಗಳನ್ನು ಬೆಳಗಿಸಲು ಸಾವಿರಾರು ಲೀಟರ್ ಸಾಸಿವೆ ಎಣ್ಣೆಯನ್ನು ಬಳಸಲಾಗುತ್ತದೆ. ಕಾರ್ಯಕ್ರಮ ಮುಗಿದ ಬಳಿಕ ದೀಪಗಳಲ್ಲಿ ಉಳಿಯುವ ಎಣ್ಣೆಯನ್ನು ಬಡ ಕುಟುಂಬಗಳು ಸಂಗ್ರಹಿಸುತ್ತವೆ. ಬಡತನದ ಕಾರಣದಿಂದಾಗಿ ದಿನಬಳಕೆಯ ಎಣ್ಣೆಯ ವೆಚ್ಚವನ್ನು ಉಳಿಸಲು, ಈ ಎಣ್ಣೆಯನ್ನು ತಮ್ಮ ಮನೆಗಳಲ್ಲಿ ಅಡುಗೆಗೆ ಅಥವಾ ದೀಪಗಳನ್ನು ಹಚ್ಚಲು ಮರುಬಳಕೆ ಮಾಡುತ್ತಾರೆ ಎಂದು ವರದಿಗಳು ತಿಳಿಸಿವೆ.
ಪ್ರತಿ ವರ್ಷವೂ ದೀಪೋತ್ಸವದ ಬೆನ್ನಲ್ಲೇ ಇಂತಹ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಹಬ್ಬದ ಅತಿ ಅದ್ಧೂರಿತನ ಮತ್ತು ಸಮಾಜದಲ್ಲಿನ ಬಡತನದ ನೈಜ ಮುಖ, ಇವೆರಡರ ನಡುವಿನ ಕಂದಕವನ್ನು ಈ ಘಟನೆ ಎತ್ತಿ ತೋರಿಸುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.