

ಮಂಗಳೂರು: ಶುಕ್ರವಾರ ನಡೆದ ಚುನಾವಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ 21ನೇ ಮೇಯರ್ ಆಗಿ ದಿವಾಕರ್ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ವೇದಾವತಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಕಂಟೋಂನ್ಮೆಂಟ್ ವಾರ್ಡಿನ ದಿವಾಕರ್ ಹಾಗೂ ಕಾಂಗ್ರೆಸ್‌ನಿಂದ ಕೇಶವ, ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ವೇದಾವತಿ ಮತ್ತು ಕಾಂಗ್ರೆಸ್‌ನಿಂದ ಝೀನತ್ ಸಂಶುದ್ದೀನ್ ನಾಮಪತ್ರ ಸಲ್ಲಿಸಿದ್ದು, ಪರಿಶೀಲಿಸಿದ ಪ್ರಾದೇಶಿಕ ಆಯುಕ್ತರು ಕ್ರಮಬದ್ಧವಾಗಿದೆ ಎಂದು ಪ್ರಕಟಿಸಿದರು.
ಬಳಿಕ ಕೈ ಎತ್ತುವ ಮೂಲಕ ಮತ ಚಲಾವಣೆ ನಡೆಯಿತು.
ಮಹಾನಗರಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್.ಡಿ.ಪಿ.ಐ 2 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ನ ಕೇಶವ ಅವರ ಪರವಾಗಿ 15 (14 ಮಂದಿ ಸದಸ್ಯರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರು ಸೇರಿ) ಮತಗಳು ಚಲಾವಣೆಯಾದರೆ, ಎಸ್‌ಡಿಪಿಐನ ಇಬ್ಬರು ಸದಸ್ಯರು ತಟಸ್ಥವಾಗಿದ್ದರು. ಬಿಜೆಪಿಯ ದಿವಾಕರ ಪಾಂಡೇಶ್ವರ ಪರವಾಗಿ 46 ಮತಗಳು (ವಿಧಾನಸಭೆ ಇಬ್ಬರು ಸದಸ್ಯರ ಮತ ಸೇರಿ) ಚಲಾವಣೆಯಾಯಿತು. ಈ ಮೂಲಕ ಪಾಲಿಕೆಯ ನೂತನ ಮೇಯರ್ ಆಗಿ ನಿರೀಕ್ಷೆಯಂತೆ ದಿವಾಕರ ಆಯ್ಕೆಯಾದರು.
ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಝೀನತ್ ಸಂಶುದ್ದೀನ್ ಪರ ಎಸ್‌ಡಿಪಿಐನ ಇಬ್ಬರು ಸದಸ್ಯರು ಮತ ಚಲಾಯಿಸಿದರು. ಇದರೊಂದಿಗೆ ಒಟ್ಟು 17 ಮತಗಳನ್ನು ಝೀನತ್ ಗಳಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ವೇದಾವತಿ 46 ಮತಗಳೊಂದಿಗೆ ಉಪಮೇಯರ್ ಆಗಿ ಆಯ್ಕೆಯಾದರು.
ಮೇಯರ್ ಹಿಂದುಳಿದ ವರ್ಗ ಎ ಉಪಮೇಯರ್ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು.
ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ.ಯಶವಂತ್, ಅಪರ ಪ್ರಾದೇಶಿಕ ಆಯುಕ್ತೆ ಕೆ.ಎಂ. ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಎಂಜೆ ರೂಪಾ ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಗೈರು ಹಾಜರಾಗಿದ್ದರು.