ದಿವ್ಯಾ ವಸಂತಳನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು

divyavasantha
Published on

ಬೆಂಗಳೂರು: ಸ್ಪಾ ವ್ಯವಸ್ಥಾಪಕನಿಗೆ ಬೆದರಿಸಿ ೧೫ ಲಕ್ಷ ರೂ. ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸುದ್ದಿವಾಹಿನಿಯ ನಿರೂಪಕಿ ದಿವ್ಯಾವಸಂತಳನ್ನು ಜೀವನ್ ಭೀಮಾನಗರ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಿವ್ಯಾ ವಸಂತ ಸ್ನೇಹಿತರ ನೆರವಿನಿಂದ ಕೇರಳಕ್ಕೆ ಪರಾರಿಯಾಗಿದ್ದಳು. ಇದೀಗ ಆಕೆಯ ಜಾಡು ಹಿಡಿದು ಬಂಧಿಸಿರುವ ಪೊಲೀಸರು, ಗುರುವಾರ ತಡರಾತ್ರಿ ನಗರಕ್ಕೆ ಕರೆ ತಂದಿದ್ದು, ಶುಕ್ರವಾರ ಕೋರ್ಟ್‌ಗೆ ಹಾಜರು ಪಡಿಸಿ ವಶಕ್ಕೆ ಪಡೆಯಲಿದ್ದಾರೆ.
ಇದೇ ಪ್ರಕರಣದಲ್ಲಿ ಈಗಾಗಾಲೇ ಖಾಸಗಿ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ) ಎಂದು ಹೇಳಿಕೊಂಡಿದ್ದ ರಾಜಾನುಕುಂಟೆ ವೆಂಕಟೇಶ್ ಮತ್ತು ದಿವ್ಯಾ ವಸಂತ ಸಹೋದರ ಸಂದೇಶ್‌ನನ್ನು ಬಂಧಿಸಲಾಗಿತ್ತು. ಸಚಿನ್ ಮತ್ತು ಆಕಾಶ್ ಎಂಬುವವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಸ್ಕೈ ರಿಸರ್ಚ್ ಟೀಂ:
ಪ್ರಾಥಮಿಕ ವಿಚಾರಣೆಯಲ್ಲಿ ಸುಲಿಗೆ ಕೃತ್ಯಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಸ್ಕೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ಅನ್ನು ವೆಂಕಟೇಶ್ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಆ ಗ್ರೂಪ್‌ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು. ಆರೋಪಿಗಳು ಒಂದು ತಂಡ ಕಟ್ಟಿಕೊಂಡು ಇತ್ತೀಚಿಗೆ ಇಂದಿರಾನಗರದ ೧೦೦ ಅಡಿ ರಸ್ತೆ ೧೫ನೇ ಮುಖ್ಯರಸ್ತೆಯ ಟ್ರೀ ಸ್ಪಾ ಆ್ಯಂಡ್ ಬ್ಯೂಟಿ’ ಪಾರ್ಲರ್‌ನ ವ್ಯವಸ್ಥಾಪಕ ಶಿವಶಂಕರ್‌ಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಯತ್ನಿಸಿದ್ದರು. ಈ ಬಗ್ಗೆ ತನಿಖೆಗಿಳಿದ ಖಾಕಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆದರಿಸಿ ಹಣ ಸುಲಿಗೆಗೆ ಯತ್ನ:
ವೆಂಕಟೇಶ್ ಹಾಗೂ ದಿವ್ಯಾ ತಂಡ ಕೆಲ ದಿನಗಳ ಹಿಂದೆ ಇಂದಿರಾನಗರದ ಟ್ರೀ ಸ್ಪಾ ಆ್ಯಂಡ್ ಬ್ಯೂಟಿ ಪಾರ್ಲರ್‌ಗೆ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿತ್ತು. ಬಳಿಕ ಗ್ರಾಹಕನ ಸೋಗಿನಲ್ಲಿ ಸ್ಪಾಗೆ ದಿವ್ಯಾ ಸೋದರ ಸಂದೇಶ್ ತೆರಳಿದ್ದ. ಈ ಮೊದಲೇ ಸ್ಪಾನಲ್ಲಿ ಕೆಲಸದಲ್ಲಿದ್ದ ತನ್ನ ಗ್ಯಾಂಗ್‌ನ ಯುವತಿ ಬಳಿಯೇ ಮಸಾಜ್‌ಗೆ ದಿನಾಂಕ ನಿಗದಿಪಡಿಸಿದ್ದ. ಆಗ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಗ್ರಾಹಕರು ಸಲುಗೆಯಿಂದಿರುವ ದೃಶ್ಯಾವಳಿಗಳನ್ನು ಸಂದೇಶ್ ಚಿತ್ರೀಕರಿಸಿಕೊಂಡಿದ್ದ. ಬಳಿಕ ತನ್ನ ನ್ಯೂಸ್ ಚಾನೆಲ್ ವರದಿಗಾರ್ತಿಯನ್ನು ಆ ಸ್ಪಾಗೆ ಕಳುಹಿಸಿ ವೆಂಕಟೇಶ್ ಹಣ ಸುಲಿಗೆಗೆ ಯತ್ನಿಸಿದ್ದ. ನಿಮ್ಮ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಂದೇಶ್ ಚಿತ್ರೀಕರಿಸಿದ್ದ ವಿಡಿಯೋವನ್ನು ಸ್ಪಾ ವ್ಯವಸ್ಥಾಪಕನಿಗೆ ತೋರಿಸಿ ವೆಂಕಟೇಶ್ ಬೆದರಿಸಿದ್ದ. ಮೊದಲು ೧೫ ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು, ಕೊನೆಗೆ ೮ ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಈ ಬೆದರಿಕೆ ಸಹಿಸಲಾರದೆ ಸ್ಪಾ ವ್ಯವಸ್ಥಾಪಕ, ಜೆ.ಬಿ.ನಗರ ಠಾಣೆಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ವೆಂಕಟೇಶ್ ತಂಡದ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ವೆಂಕಟೇಶ್ ಹಾಗೂ ಸಂದೇಶ್‌ನನ್ನು ಮೊದಲಿಗೆ ಬಂಧಿಸಲಾಗಿತ್ತು. ಅಲ್ಲದೆ, ಈ ತಂಡ ಈ ಹಿಂದೆ ವೈದ್ಯರು ಸೇರಿ ೧೦೦ಕ್ಕೂ ಹೆಚ್ಚು ಮಂದಿಗೆ ಬ್ಲಾೃಕ್‌ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದೆ ಎಂಬುದು ಗೊತ್ತಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net