ಏಕತೆ ಹೆಸರಿನಲ್ಲಿ ಬಹುತ್ವ ನಾಶಕ್ಕೆ ಬಿಡಬಾರದು: ಸಿಎಂ ಸಿದ್ದರಾಮಯ್ಯ

IMG-20240915-WA0008
Published on

ಬೆಂಗಳೂರು: ಏಕತೆ ಹೆಸರಿನಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ಪ್ರಬಲವಾಗಿ ಬಹುತ್ವ ನಾಶಕ್ಕೆ ಪ್ರಜಾಪ್ರಭುತ್ವವಾದಿಗಳು ಬಿಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು‌.

ವಿಶ್ವ ಪ್ರಜಾಪ್ರಭುತ್ವ ದಿನದ ನಿಮಿತ್ತ ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮೇಲೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ, ಅತಿ ಉದ್ದನೆಯ ಮಾನವ ಸರಪಳಿಗೆ ಕೈಜೋಡಿಸಿದರು. ನಂತರ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆಯಡಿ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ತಿರುಗಿಸಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಪದೇ ಪದೇ ಟೀಕಿಸುತ್ತಿದೆ. ಈ ವಿಷಯದಲ್ಲಿ ತಪ್ಪಾಗಿದ್ದರೆ ತಿದ್ದಿಕೊಳ್ಳೋಣ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.

ಎಸ್ ಸಿ, ಎಸ್ ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕಾದಿರಿಸುವ ಕಾನೂನು ಮೊದಲು ಜಾರಿಗೆ ತಂದಿದ್ದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ. ಅನುದಾನ ಡೈವರ್ಟ್ ಮಾಡಿದ್ದೇವೆ ಎಂದು ಬಿಜೆಪಿಯವರು ತಮ್ಮದೇ ಆಡಳಿತದ ರಾಜ್ಯಗಳು, ಕೇಂದ್ರದಲ್ಲಿ ಈ ಕಾನೂನು ಜಾರಿಗೊಳಿಸಲಿ ಎಂದು ಸಿದ್ದರಾಮಯ್ಯ ಸೆಡ್ಡು ಹೊಡೆದರು.

ಪೀಠಿಕೆ ಅರ್ಥೈಸಲು ಪ್ರಯತ್ನ

ಸಂವಿಧಾನದ ಪೀಠಿಕೆಯಲ್ಲಿ ಅತ್ಯಂತ ದೊಡ್ಡ ಮೌಲ್ಯಗಳಿವೆ. ಹೀಗಾಗಿಯೇ ಪ್ರತಿ ಶಾಲಾ ಕಾಲೇಜುಗಳಲ್ಲಿ ಇದನ್ನು ಓದಿಸುವ, ಅರ್ಥೈಸುವ , ಪಾಲಿಸುವ ಪ್ರಯತ್ನ‌ ಮುನ್ನಡೆಸಿದ್ದೇವೆ ಎಂದರು.

ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ‌ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು ಎಂದು ಕರೆ ನೀಡಿದರು.

ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕುವವರೆಗೂ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಿಕ್ಕಿನಲ್ಲಿ, ಎಲ್ಲಾ ಜಾತಿ-ಎಲ್ಲಾ ಧರ್ಮದ ಬಡವರಿಗೆ, ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ.

ಸಮಾನತೆ ವಿರೋಧಿಗಳು

ಏಕತೆ ಭಜನೆ ಮಾಡುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳು ಸಾಮಾಜಿಕ ನ್ಯಾಯ, ಸಮಾನತೆಯ ವಿರೋಧಿಗಳು. ಇವರು ಸಮಾಜದ ಶತ್ರುಗಳು ಇವರನ್ನು ಮೆಟ್ಟಿ ನಿಲ್ಲದ ಹೊರತು ಮಹಿಳೆಯರ, ದಲಿತರ, ಹಿಂದುಳಿದವರ ಹಕ್ಕುಗಳು, ಅವಕಾಶಗಳು ಸಿಗಲು ಸಾಧ್ಯವಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಮತ್ತು ಇವರ ಜತೆಗಿರುವ ವಿಚ್ಚಿದ್ರಕಾರಕ ಶಕ್ತಿಗಳು ಬಡವರ, ಮಧ್ಯಮ ವರ್ಗದ ವಿರೋಧಿಗಳು. ಇವರು ಬಡವರ ಪರವಾದ ಕಾರ್ಯಕ್ರಮಗಳು ಜಾರಿ ಆಗಲು ಬಿಡುವುದಿಲ್ಲ. ಆದ್ದರಿಂದ ಇವರನ್ನು ನಾವು ಸೋಲಿಸಬೇಕು ಎಂದರು.

20 ಲಕ್ಷಕ್ಕೂ ಹೆಚ್ಚು ಮಂದಿಯ ಮಾನವ ಸರಪಳಿ ರಚಿಸಿರುವುದೇ ದುಷ್ಟಶಕ್ತಿಗಳಿಗೆ ಎಚ್ಚರಿಕೆ ನೀಡಿ ಮನುಷ್ಯ ಸಮಾಜವನ್ನು ಬೆಸೆಯುವುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅರ್ಥಪೂರ್ಣ ದಿನ

ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಪ್ಪ,  ಪೌರ ಕಾರ್ಮಿಕ ತಾಯಂದಿರಾದ ನಾಗಲಕ್ಷ್ಮಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡ-ಬಲದಲ್ಲಿ ನಿಂತು ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣಗೊಳಿಸಿದರು.

ಶಾಸಕರಾದ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ರುದ್ರಪ್ಪ ಲಮಾಣಿ,  ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಯು.ಬಿ.ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಗಲಿಬಿಲಿ ಸೃಷ್ಟಿಸಿದ ಆಗಂತುಕ

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡುವ ವೇಳೆ ಆಗಂತುಕನೊಬ್ಬ ಸಿಎಂ, ಸಚಿವರು, ಶಾಸಕರಿಗೆ ಗಲಿಬಿಲಿ ಸೃಷ್ಟಿಸಿದ ಪ್ರಸಂಗ ನಡೆಯಿತು.

ವೇದಿಕೆ ಮುಂಭಾಗದ ಕೆಳಗಿನ ಆಸನಗಳಲ್ಲಿ ಕಾರ್ಯಕ್ರಮ ಶುರುವಾಗುವ ಮುನ್ನವೇ ಯುವಕನೊಬ್ಬ ಬಂದು ಕುಳಿತಿದ್ದ. ಇನ್ನೇನು ಸಚಿವ ಮಹದೇವಪ್ಪ ಮಾತು ಮುಗಿಸುತ್ತಿರುವಾಗ ಈ ಅಪರಿಚಿತ ಚಂಗನೆ ಎತ್ತರದ ವೇದಿಕೆಗೆ ಹಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಲು ಹಾಕುವುದಕ್ಕೆ ಮುಂದಾದ.

ವೇದಿಕೆ ಅಕ್ಕಪಕ್ಕದಲ್ಲಿದ್ದ ಸಿಎಂ ಅಂಗರಕ್ಷಕರು ಹಾಗೂ ಪೊಲೀಸರು ಓಡಿಬಂದು ಯುವಕನನ್ನು ದರದರನೆ ಕೆಳಗೆ ಎಳೆದೊಯ್ದು ನಂತರ ಕೆಳಗಿದ್ದ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದರೆ, ಇತ್ತ ಮಹದೇವಪ್ಪ ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು. ಈ ಘಟನೆಯ ನಡುವೆ ಕಾರ್ಯಕ್ರಮ ಯಥಾರೀತಿ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net