

ನವದೆಹಲಿ: ಮಹತ್ವದ ಅಂತಾರಾಷ್ಟ್ರೀಯ ಬೆಳವಣಿಗೆಯೊಂದರಲ್ಲಿ ಅಮೆರಿಕದ ಜೋ ಬೈಡೆನ್ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿನ್ಕೆನ್ ಬುಧವಾರ ಸೆಂಟ್ರಲ್ ಟಿಬೆಟನ್ ಅಡ್ಮಿನಿಸ್ಟ್ರೇಶನ್ (ಸಿಟಿಎ)ನ ಪ್ರತಿನಿಧಿಯನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಈ ಬೆಳವಣಿಗೆ ಚೀನಾಕ್ಕೆ ಸ್ಪಷ್ಟ ಸಂದೇಶವಾಗಿದೆ.
ಬ್ಲಿನ್ಕೆನ್ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಮಂಗಳವಾರ ರಾತ್ರಿ ನವದೆಹಲಿ ತಲುಪಿದ್ದರು. ಟಿಬೆಟ್ನ ಉಚ್ಚಾಟಿತ ಧರ್ಮಗುರು ದಲೈ ಲಾಮಾ ಅವರ ಪ್ರತಿನಿಧಿ ಗೊಡುಪ್ ಡೊಂಗ್ಚುಂಗ್ ಅವರನ್ನು ಭೇಟಿ ಮಾಡಿ ಅವರು ಸಂಕ್ಷಿಪ್ತ ಮಾತುಕತೆ ನಡೆಸಿದರು. ಚೀನಾ ಪೀಪಲ್ಸ್ ಲಿಬರೇಶನ್ ಆರ್ವಿು 1950ರಲ್ಲಿ ಟಿಬೆಟನ್ನು ಸ್ವಾಧೀನ ಪಡಿಸಿಕೊಂಡಿದ್ದು, ಇದನ್ನು ‘ಶಾಂತಿಯುತ ವಿಮೋಚನೆ’ ಎಂದು ಹೇಳಿಕೊಂಡಿದೆ. ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ದಲೈ ಲಾಮಾ 1959ರಲ್ಲಿ ಭಾರತಕ್ಕೆ ಬಂದು ಆಶ್ರಯ ಪಡೆದುಕೊಂಡರು. ಅಲ್ಲಿಂದೀಚೆಗೆ ಭಾರತದ ಧರ್ಮಶಾಲಾದಲ್ಲಿದ್ದುಕೊಂಡು ಸಿಟಿಎ ಟಿಬೆಟ್ನ ಸರ್ಕಾರ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿಟಿಎ ಮತ್ತು ಟಿಬೆಟ್ ಪರ ಸಂಘಟನೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಸಿಕ್ಕ ತೊಡಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಚೀನಾ ವಿರುದ್ಧ ವಿಶೇಷವಾಗಿ ಅಮೆರಿಕದಿಂದ ಟೀಕೆಗಳು ವ್ಯಕ್ತವಾಗಿವೆ.
ಶ್ವೇತ ಭವನಕ್ಕೆ ಸಿಟಿಎ ಪ್ರತಿನಿಧಿ: ದೇಶಭ್ರಷ್ಟವಾಗಿರುವ ಟಿಬೆಟನ್ ಸರ್ಕಾರದ ಮಾಜಿ ಮುಖ್ಯಸ್ಥ ಲೊಬ್ಸಾಂಗ್ ಸನ್ಗಯ್ ಕಳೆದ ನವೆಂಬರ್ ತಿಂಗಳಲ್ಲಿ ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಪ್ರಮುಖರ ಜತೆಗೆ ಮಾತುಕತೆ ನಡೆಸಿದ್ದರು. ಕಳೆದ ಆರು ದಶಕಗಳ ಅವಧಿಯಲ್ಲಿ ಇಂತಹ ಭೇಟಿ ಇದೇ ಮೊದಲಾಗಿತ್ತು. ಇದಾಗಿ, ಒಂದೇ ತಿಂಗಳಿಗೆ ಅಮೆರಿಕದ ಕಾಂಗ್ರೆಸ್ ಟಿಬೆಟ್ ನೀತಿ ಮತ್ತು ಬೆಂಬಲ ಕಾಯ್ದೆಯನ್ನು ಅಂಗೀಕರಿಸಿತ್ತು. ದಲೈ ಲಾಮಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಟಿಬೆಟಿನ್ನರ ಹಕ್ಕು. ಟಿಬೆಟ್ನ ರಾಜಧಾನಿ ಲ್ಹಾಸಾದಲ್ಲಿ ಅಮೆರಿಕದ ರಾಯಭಾರ ಕಚೇರಿ ಸ್ಥಾಪನೆ ಮಾಡುವ ಅಂಶ ಕಾಯ್ದೆಯಲ್ಲಿತ್ತು.
ಬ್ಲಿನ್ಕೆನ್ - ಡೊಂಗ್ಚುಂಗ್ ಸ್ನೇಹ
ಟಿಬೆಟ್ ನಾಯಕ ಗೊಡುಪ್ ಡೊಂಗ್ಚುಂಗ್ ಮತ್ತು ಬ್ಲಿನ್ಕೆನ್ ನಡುವಿನ ಸ್ನೇಹ ಸಂಪರ್ಕಕ್ಕೆ ಐದು ವರ್ಷಗಳ ಇತಿಹಾಸವಿದೆ. 2016ರಲ್ಲಿ ವಾಷಿಂಗ್ಟನ್ಗೆ ದಲೈ ಲಾಮಾ ಭೇಟಿ ನೀಡಿದ ವೇಳೆ ಅಂದಿನ ಅಧ್ಯಕ್ಷ ಬರಾಕ್ ಒಬಾಮಾರ ಜತೆಗೆ ಮಾತುಕತೆ ನಡೆಸಿದ್ದರು. ಆಗ ಮೊದಲ ಬಾರಿಗೆ ಬ್ಲಿನ್ಕೆನ್ ಮತ್ತು ಡೊಂಗ್ಚುಂಗ್ ನಡುವೆ ಪರಿಚಯ, ಮಾತುಕತೆ ನಡೆದಿತ್ತು.
ಭಾರತಕ್ಕೆ ಮೊದಲ ಭೇಟಿ
ಅಮೆರಿಕದಲ್ಲಿ ಜೋ ಬೈಡೆನ್ ಸರ್ಕಾರ ರಚನೆಯಾದ ಬಳಿಕ ಬ್ಲಿನ್ಕೆನ್ ಇದೇ ಮೊದಲ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಇತರೆ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜತೆಗೂ ಮಾತುಕತೆ ನಿಗದಿ ಆಗಿತ್ತು. ಕೋವಿಡ್ 19 ನಿರ್ವಹಣೆ, ಅಫ್ಘಾನಿಸ್ತಾನದ ಬೆಳವಣಿಗೆ, ಮಾನವ ಹಕ್ಕುಗಳ ವಿಚಾರ ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ. ಬುಧವಾರದ ಮಾತುಕತೆ ಬಳಿಕ ಬ್ಲಿನ್ಕೆನ್ ಕುವೈತ್ಗೆ ತೆರಳಿದ್ದಾರೆ. ಮಂಗಳವಾರ ಭಾರತಕ್ಕೆ ಬರುವ ಮುನ್ನ ಅವರು ನೇಪಾಳಕ್ಕೆ ಹೋಗಿ ಅಲ್ಲಿನ ನಾಯಕರ ಜತೆಗೆ ಮಾತುಕತೆ ನಡೆಸಿದ್ದರು.
ಚೀನಾ ಬೆಂಬಲ ಕೋರಿದ ತಾಲಿಬಾನ್
ಬೀಜಿಂಗ್: ಅಫ್ಘಾನಿಸ್ತಾನದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್, ಅದಕ್ಕೆ ಚೀನಾದ ಬೆಂಬಲವನ್ನು ಬಯಸಿದೆ. ತಾಲಿಬಾನ್ ಉಗ್ರ ಸಂಘಟನೆಯ ಉನ್ನತ ನಾಯಕ ಮುಲ್ಲಾ ಬರಾದಾರ್ ಅಖುಂಡ್ ನೇತೃತ್ವದ ಒಂಬತ್ತು ಸದಸ್ಯರ ನಿಯೋಗವೊಂದು ಮಂಗಳವಾರ ಮತ್ತು ಬುಧವಾರ ಬೀಜಿಂಗ್ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದೆ. ವಾಂಗ್ ಅಫ್ಘಾನಿಸ್ತಾನ ಕುರಿತ ಚೀನಾದ ವಿಶೇಷ ಪ್ರತಿನಿಧಿಯೂ ಆಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯಲ್ಲಿ ತಾಲಿಬಾನ್ಗೆ ಮಹತ್ವದ ಪಾತ್ರವಿದೆ ಎಂದು ಚೀನಾ ಅಭಿಪ್ರಾಯ ಪಟ್ಟಿರುವುದು ಒಂದು ಮಹತ್ವದ ವಿದ್ಯಮಾನವಾಗಿದೆ. ಆಫ್ಘಾನ್ ನೆಲವನ್ನು ಬೇರೆ ದೇಶಗಳ ಮೇಲೆ ದಾಳಿಗೆ ಬಳಸಲು ಭಯೋತ್ಪಾದಕರಿಗೆ ಅವಕಾಶ ಕೊಡುವುದಿಲ್ಲ ಎಂದು ತಾಲಿಬಾನ್ ಹೇಳಿರುವುದು ಕೂಡ ಪ್ರಮುಖ ಬೆಳವಣಿಗೆಯಾಗಿದೆ. ಚೀನಾ ಕೂಡ ಅಫ್ಘಾನಿಸ್ತಾನದೊಂದಿಗೆ ಗಡಿ ಹೊಂದಿರುವುದರಿಂದ ತಾಲಿಬಾನ್ನ ಈ ಆಶ್ವಾಸನೆ ಚೀನಾ ದೃಷ್ಟಿಯಲ್ಲಿ ಮಹತ್ವದ್ದಾಗಿದೆ.
ಅಮೆರಿಕ ವಾಪಸಾತಿ
2 ದಶಕಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕದ ಪಡೆಗಳು ಈ ವರ್ಷ ಸೆಪ್ಟೆಂಬರ್ನಲ್ಲಿ ಸಂಪೂರ್ಣವಾಗಿ ವಾಪಸ್ ಹೋಗುವುದರಿಂದ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿನ ಯುದ್ಧ ಕೊನೆಗಾಣಿಸಿ ಶಾಂತಿ ಸ್ಥಾಪನೆ ಹಾಗೂ ದೇಶದ ಮರುನಿರ್ವಣದಲ್ಲಿ ತಾಲಿಬಾನ್ ಸಂಘಟನೆ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ ಎಂದು ನಿಯೋಗಕ್ಕೆ ಚೀನಿ ನಾಯಕರು ಹೇಳಿದ್ದಾರೆ. ಚೀನಾದ ರಾಷ್ಟ್ರೀಯ ಭದ್ರತೆಗೆ ನೇರ ಅಪಾಯವಾಗಿರುವ ಈಸ್ಟ್ ಟರ್ಕಿಸ್ತಾನ್ ಇಸ್ಲಾಮಿಕ್ ಮೂವ್ವೆುಂಟ್ ವಿರುದ್ಧ ತಾಲಿಬಾನ್ ಕಠಿಣ ಕ್ರಮ ಕೈಗೊಳ್ಳಬಹುದೆಂಬುದು ಚೀನಾದ ನಿರೀಕ್ಷೆಯಾಗಿದೆ.
ಚೀನಾ ಆತಂಕ ಏನು?
ವಖಾನ್ ಕಾರಿಡಾರ್ ಮೂಲಕ ಉಯ್ಘರ್ ಉಗ್ರವಾದಿ ಚಳವಳಿಕಾರರು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆಯಬಹುದು ಎಂಬುದು ಚೀನಾದ ಆತಂಕವಾಗಿತ್ತು. ಆದರೆ ತಾಲಿಬಾನ್ ನಿಯೋಗದ ಆಶ್ವಾಸನೆ ಅದಕ್ಕೆ ಸಮಾಧಾನ ತಂದಿದೆ. ಉಭಯ ದೇಶಗಳ ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಷಯಗಳು, ಆಫ್ಘಾನ್ನಲ್ಲಿನ ಪ್ರಸಕ್ತ ಸ್ಥಿತಿಗತಿ, ಶಾಂತಿ ಪ್ರಕ್ರಿಯೆ ಮೊದಲಾದ ವಿಚಾರಗಳನ್ನು ರ್ಚಚಿಸಲಾಗಿದೆ ಎಂದು ತಾಲಿಬಾನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.