

ಭದ್ರಾವತಿ: ವಾರ್ಡಿನ ಸಮಸ್ಯೆಗಳು ಕೇವಲ ಸದಸ್ಯರಿಗಷ್ಟೇ ಸೀಮಿತವಾಗಿರುವುದಿಲ್ಲ. ಇದರಲ್ಲಿ ಅಧಿಕಾರಿಗಳ ಜವಾಬ್ದಾರಿಯೂ ಇದೆ. ಅಧಿಕಾರಿಗಳು ಮಾಡುವ ತಪ್ಪಿಗೆ ಸದಸ್ಯರು ತಲೆತಗ್ಗಿಸುವಂತಾಗಿದೆ. ಮರ್ಯಾದೆ ಬಿಟ್ಟು ರಾಜಕಾರಣ ಮಾಡಬೇಕೇನ್ರೀ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಸದಸ್ಯ ಬಿ.ಕೆ.ಮೋಹನ್ ಕಿಡಿಕಾರಿದರು.
ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಎದುರಾದ ಸಮಸ್ಯೆಗಳ ಕುರಿತು ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ನಾಗರಿಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ವಾರ್ಡ್‌ಗಳಲ್ಲೂ ರಸ್ತೆ ಚರಂಡಿಗಳು ಹಾಳಾಗಿವೆ. ರಾಜಕಾಲುವೆಗಳು ಸರಿ ಇಲ್ಲದೆ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಕಾಲುವೆಗಳಲ್ಲಿರುವ ಹೂಳು ತೆಗೆಯದೆ ಬಿಟ್ಟಿರುವುದೇ ಇದಕ್ಕೆಲ್ಲ ಕಾರಣ. ಮಳೆಗಾಲದ ಮುಂಚಿತವಾಗಿ ಹೂಳು ತೆಗೆಯಬೇಕೆಂಬ ತಿಳಿವಳಿಕೆಯೂ ನಿಮಿಗಿಲ್ಲವೇ ಎಂದು ಪ್ರಶ್ನಿಸಿದರು.
ರಸ್ತೆಗಳಲ್ಲಿ ಗುಂಡಿಗಳಾಗಿವೆ. ಟೆಂಡರ್ ಕರೆದು ಗುಂಡಿ ಮುಚ್ಚಿಸಿ ಎಂದು ಹೇಳಿದರೂ ಹಾಗೆಯೇ ಬಿಟ್ಟಿದ್ದೀರಿ. ಈ ಕೂಡಲೇ ತುರ್ತು ಕಾಮಗಾರಿ ನಡೆಸಲು ವ್ಯವಸ್ಥೆ ಮಾಡಿಕೊಳ್ಳಿ. ಭೂತನಗುಡಿ, ಹುಡ್ಕೋ ಕಾಲನಿ, ಬುಳ್ಳಾಪುರ, ಬೊಮ್ಮನಕಟ್ಟೆ ಮೋಮಿನ್ ಮೊಹಲ್ಲಾ ಭಾಗಗಳಲ್ಲಿ ಎದುರಾದ ಸಮಸ್ಯೆಗಳನ್ನು ನೋಡಿಕೊಂಡು ಬಂದು ಏನು ಕ್ರಮ ಕೈಗೊಂಡಿದ್ದೀರಿ ತಿಳಿಸಿ ಎಂದು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ಇಂಜಿನಿಯರ್ ಪ್ರಸಾದ್‌ಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ, ಟೆಂಡರ್ ಕರೆಯದೆ ಕೆಲಸ ಮಾಡಲು ಆಗುವುದಿಲ್ಲ. ಶೀಘ್ರವೇ ಕಾಮಗಾರಿಗಳಿಗೆ ಟೆಂಡರ್ ಕರೆದು ಕೆಲಸ ಮಾಡಿಸಲಾಗುವುದು. ಕೆಲವು ಭಾಗಗಳಲ್ಲಿ ರಾಜಕಾಲುವೆ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಎಲ್ಲವನ್ನೂ ಶೀಘ್ರವೇ ಸರಿಪಡಿಸಲಾಗುವುದು ಎಂದರು.
ಸದಸ್ಯ ಉದಯಕುಮಾರ್ ಮಾತನಾಡಿ, ಬುಳ್ಳಾಪುರ, ಉಜ್ಜನೀಪುರ ಸೇರಿ ಆ ಭಾಗದ ಎಲ್ಲ ಕೊಳಚೆ ನೀರು ಹುಡ್ಕೋ ಕಾಲನಿ ಬಳಿ ಇರುವ ರಾಜಕಾಲುವೆ ಸೇರುತ್ತಿತ್ತು. ನಂತರ 4 ಭಾಗವಾಗಿ ಹರಿದು ಮುಂದೆ ಹೋಗುತ್ತಿತ್ತು. ಈಗ ಬೈಪಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಮೇಲಿನಿಂದ ಹರಿದು ಬರುವ ನೀರನ್ನು ಒಂದೇ ರಾಜಕಾಲುವೆಗೆ ಬಿಡಲಾಗುತ್ತಿದೆ. ಪೈಪ್ ಸಣ್ಣದಿದ್ದು ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳಿಗೆ ನುಗ್ಗುತ್ತಿದೆ ಎಂದು ಗಮನಕ್ಕೆ ತಂದರು. ಇದಕ್ಕೆ ಸ್ಥಳೀಯ ನಿವಾಸಿ ಪುಟ್ಟರಾಜು ದನಿಗೂಡಿಸಿದರು.
ಮನೆಯ ಪತ್ರಗಳು, ನಿತ್ಯ ಬಳಕೆಯ ವಸ್ತುಗಳು ನೀರು ಪಾಲಾಗಿವೆ. ಚಾಪೆ, ದಿಂಬು, ಬೆಡ್‌ಶೀಟ್, ಪ್ರಿಡ್ಜ್, ವಾಷಿಂಗ್ ಮಷಿನ್‌ಗಳು ಹಾಳಾಗಿವೆ ಎಂದು ಹುಡ್ಕೋ ಕಾಲನಿ ನಿವಾಸಿಗಳು ಅಳಲು ತೋಡಿಕೊಂಡರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಇತರರಿದ್ದರು.