

ಶಿವಮೊಗ್ಗ: ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ಎಸ್.ಪರಮೇಶ್ವರ್ ಮಂಗಳವಾರ ಸರ್ವಾನುಮತದಿಂದ ಆಯ್ಕೆಯಾದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಸೆಯಿದೆ. ಇಂದು ಹಲವು ಸಣ್ಣ ಸಮುದಾಯಗಳು ಅಭಿವೃದ್ಧಿಯಾಗಿವೆ. ಸವಿತಾ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂದು ಹೇಳಿದರು.
ನಿಶ್ಚಿತ ಗುರಿ ತಲುಪಲು ಸಮಾಜದಲ್ಲಿ ಒಗ್ಗಟ್ಟು ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರನ್ನೂ ಜೋಡಿಸಿಕೊಂಡು ಸದಸ್ಯರ ಸಂಖ್ಯೆ ಹೆಚ್ಚಿಸಿ, ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಚಿಂತಿಸಲಾಗಿದೆ. ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣದ ಗುರಿಯಿದೆ. ಎಲ್ಲ ತಾಲೂಕುಗಳ ಸವಿತಾ ಸಮಾಜದ ಕೇಂದ್ರಗಳಲ್ಲಿ ಕಂಪ್ಯೂಟರ್ ಅಳವಡಿಸಿ ಸಮಾಜದವರ ವಿಳಾಸವನ್ನು ಡಿಜಿಟಲೀಕರಣ ಮಾಡುವ ಯೋಜನೆಯಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಸೌಲಭ್ಯ ಸಿಗಬೇಕು. ಇದಕ್ಕಾಗಿ ಎಲ್ಲರ ಸಹಕಾರ ಪಡೆಯಲಿದ್ದೇನೆ. ಮಾಡಿದ ಕೆಲಸ ಶಾಶ್ವತವಾಗಿರಬೇಕು. ಜನ ನಮ್ಮನ್ನು ನೆನಪಿನಲ್ಲಿಡುವ ಕೆಲಸ ಮಾಡಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ಸವಿತಾ ಸಮಾಜದ ವಿವಿಧ ತಾಲೂಕಿನ ಅಧ್ಯಕ್ಷರಾದ ಗಿರೀಶ್, ವಿಶ್ವನಾಥ್, ರಂಜಿತ್, ಮಂಜುನಾಥ, ತೇಜಪ್ಪ, ಸತ್ಯನಾರಾಯಣ, ಶಿವಮೊಗ್ಗ ತಾಲೂಕು ಉಪಾಧ್ಯಕ್ಷ ಪ್ರಭಾಕರ್, ಮಾಜಿ ಕಾರ್ಯದರ್ಶಿ ರವಿ, ಪ್ರಮುಖರಾದ ಮೋಹನ್ ಇದ್ದರು.