

ಕೊಪ್ಪಳ : ಜಿಲ್ಲೆಯ ಸ್ವಸಹಾಯ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಕೋಳಿ ಮೊಟ್ಟೆ ಪೂರೈಸುತ್ತಿರುವ ಮಾದರಿ ಕಾರ್ಯ ರಾಜ್ಯಕ್ಕೆ ಅನ್ವಯ ಆಗುತ್ತಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಒಕ್ಕೂಟ ಅಡಿಯಲ್ಲಿ ಜಿಲ್ಲೆಯ ಕುದರಿಮೋತಿ ಗ್ರಾಪಂ ವ್ಯಾಪ್ತಿಯ ಸ್ವಸಹಾಯ ಗುಂಪಿನವರು ಕೋಳಿ ಸಾಕಾಣೆ ಘಟಕ ಆರಂಭಿಸಿದ್ದಾರೆ. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡುತ್ತಿದ್ದು ರಾಜ್ಯದ ಗಮನ ಸೆಳೆದಿದೆ. ರಾಜ್ಯಕ್ಕೆ ವಿಸ್ತರಿಸಲು ಸಿಎಂ ಬಜೆಟ್ನಲ್ಲಿ ಘೋಷಿಸಿದ್ದಾರೆ. ಮಾದರಿ ಕಾರ್ಯಕ್ಕೆ ಪ್ರಶಸ್ತಿಯೂ ದೊರೆತಿರುವುದು ಅಭಿನಂದನಾರ್ಹ. ರಾಜ್ಯದಲ್ಲಿ ಯಶಸ್ವಿಯಾಗಿ ಮುಂದಿನ ದಿನಮಾನಗಳಲ್ಲಿ ದೇಶಾದ್ಯಂತ ವಿಸ್ತರಣೆಯಾಗಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೊರೆತ ಅನುದಾನ ಸದ್ಬಳಕೆಯಾಬೇಕು. ಮಕ್ಕಳ ಪಾಲನೆ ಜತೆಗೆ ಕಚೇರಿ ಕೆಲಸ ಯಶಸ್ವಿಯಾಗಿ ಮಾಡುವ ಶಕ್ತಿ ಮಹಿಳೆಯರಲ್ಲಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯಬೇಕು. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ಎಲ್ಲರೂ ಸಹಕರಿಸಬೇಕು. ರಾಜಕೀಯದಲ್ಲಿರುವ ಮಹಿಳಾ ಜನಪ್ರತಿನಿಧಿಗಳ ಆಡಳಿತದಲ್ಲಿ ಪುರುಷರ ಹಸ್ತಕ್ಷೇಪ ಕೊನೆಯಾಗಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮಕ್ಕೆ ಸಾಕ್ಷಿ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿದರು. ಎನ್ಆರ್ಎಲ್ಎಂ ಸಂಜೀವಿನಿ ಟಕದ ಅಂಬಣ್ಣ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.