

ಕೋಲಾರ: ಜಿಲ್ಲೆಯಾದ್ಯಂತ ಮುಂದುವರಿದ ವರ್ಷಧಾರೆಗೆ ಮನೆ ಗೋಡೆ ಕುಸಿದು ಒಬ್ಬ ಮೃತಪಟ್ಟಿದ್ದರೆ ಹತ್ತಾರು ಕಡೆ ಮನೆಗಳು ಕುಸಿದು ಬಿದ್ದಿವೆ. ನದಿಯಂತೆ ಕೋಡಿ ಹರಿಯುತ್ತಿರುವ ಕೆರೆಗಳು, ರಾಜಕಾಲುವೆಗಳು ಒಂದೆಡೆಯಾದರೆ ತಗ್ಗು ಪ್ರದೇಶಗಳು ಜಲಾವೃತವಾಗಿ ಬಯಲುಸೀಮೆ ಕೋಲಾರ ಅರಕ್ಷಶಃ ಮಲೆನಾಡಿನಂತಾಗಿದೆ.
ಹವಾಮಾನ ತಜ್ಞರ ಮನ್ಸೂಚನೆ ಪ್ರಕಾರವೇ ಗುರುವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ರಾತ್ರಿಯಿಡೀ ಸುರಿದಿದ್ದು, ಕೋಲಾರ ತಾಲೂಕಿನ ಕೆಂದಟ್ಟಿಯಲ್ಲಿ ಸಾಧಾರಣ ಸ್ಥಿತಿಯಲ್ಲಿದ್ದ ಮನೆಯೊಂದರ ಗೋಡೆ ಕುಸಿದು ಪ್ರಭಾಕರ್ (50) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದಿದ್ದರಿಂದ ಇತರರು ಅದೃಷ್ಟವಶಾತ್ ಪಾರಾಗಿದ್ದಾರೆ.
ನಗರದ ಗೌರಿಪೇಟೆಯಲ್ಲಿ ಯಾರೂ ವಾಸವಿರದ ಹಳೆಯ ಮನೆಯೊಂದು ಕುಸಿದು ಬಿದ್ದಿದೆ. ಕೋಲಾರಮ್ಮ ಕೆರೆ ಪ್ರದೇಶದ ಸುತ್ತಲಿರುವ ನಗರದ ಸಿ.ಬೈರೇಗೌಡ ನಗರ, ಬೆಮಲ್ ಲೇಔಟ್ ಹಾಗೂ ಶಂಕರ ವಿದ್ಯಾಲಯ ಸುತ್ತಮುತ್ತಲ ಪ್ರದೇಶ, ಬಿಜಿಎಸ್ ಶಾಲೆ ಜಲಾವೃತಗೊಂಡಿದೆ. ಅಂಬೇಡ್ಕರ್ ನಗರ, ಗಾಂಧಿನಗರ, ಕಾರಂಜಿಕಟ್ಟೆ ಪ್ರದೇಶ ಕೆರೆಯಂತಾಗಿ ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರಹಾಕಲು ನಿವಾಸಿಗಳು ಪರದಾಡುವಂತಾಗಿತ್ತು.
ಪೊಲೀಸರ ನಿಯೋಜನೆ: ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿ ಬರುವ ಆರ್‌ಟಿಒ ಕಚೇರಿ ಆವರಣ ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಅಧಿಕಾರಿ, ಸಿಬ್ಬಂದಿ, ಕೆಲಸ ಕಾರ್ಯಕ್ಕೆ ಬಂದಿದ್ದ ಸಾರ್ವಜನಿಕರು ಮೊಣಕಾಲಿನಷ್ಟಕ್ಕೆ ನಿಂತಿದ್ದ ನೀರಿನಲ್ಲೇ ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿತ್ತು.
ಕೋಲಾರಮ್ಮ ಕೆರೆಯ ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶತಮಾನಗಳಷ್ಟು ಹಳೆಯದಾದ ಸೇತುವೆ ಶಿಥಿಲಗೊಂಡಿರುವುದರಿಂದ ಕುಸಿಯುವ ಭೀತಿಯಲ್ಲಿ ಸೇತುವೆ ಮೇಲೆ ಮತ್ತು ಹೊಸ ಸೇತುವೆಯ ಮೇಲೂ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಗರ ಹೊರವಲಯದ ಅಮಾನಿಕೆರೆ ಕೋಡಿಯಲ್ಲೂ ಭಾರಿ ಪ್ರಮಾಣದ ನೀರು ಹೊರ ಹರಿವಿನಿಂದ ರಾಜಕಾಲುವೆ ಸುತ್ತಮುತ್ತಲ ಭಾಗದಲ್ಲಿನ ರೈತರ ಬೆಳೆಗಳು, ಸ್ಮಶಾನಗಳು ಜಲಾವೃತಗೊಂಡಿವೆ. ಮಡೇರಹಳ್ಳಿಯಲ್ಲೂ ರಾಜಕಾಲುವೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡ್ಡಿಯಾಗಿತ್ತು.
ನಗರದ ಚಿಕ್ಕಬಳ್ಳಾಪುರ ರಸ್ತೆಯಿಂದ ಅರಹಳ್ಳಿಗೆ ಹೋಗುವ ಮಾರ್ಗಮಧ್ಯೆ ಇರುವ ರಾಜಕಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಸಂಪರ್ಕ ಸ್ಥಗಿತಗೊಂಡಿದ್ದಲ್ಲದೆ ತಗ್ಗುಪ್ರದೇಶದಲ್ಲಿದ್ದ ವಿನಾಯಕನ ಗುಡಿ ಮುಳುಗಡೆಯಾಗಿದೆ. ಕೋಲಾರದಿಂದ ಮಣಿಘಟ್ಟದ ಕಡೆಗೆ ತೆರಳುವ ಮಾರ್ಗಮಧ್ಯೆ ಹೊದಲವಾಡಿ ಚಿನ್ನಾಪುರ ರಸ್ತೆ ಬಳಿ 4 ಅಡಿಗಳಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಆಟೋ, ದ್ವಿಚಕ್ರ ವಾಹನಗಳು ಸೇರಿ ಇತರ ವಾಹನಗಳು ಸಂಚರಿಸಲು ಅಡ್ಡಿಯಾಗಿತ್ತು.
ತಾಲೂಕಿನ ಎಸ್.ಅಗ್ರಹಾರ ಗ್ರಾಮದಲ್ಲಿ ನಾರಾಯಣಸ್ವಾಮಿ ಹಾಗೂ ವೆಂಕಟರಮಣಪ್ಪ ಎಂಬುವರ ಮನೆಗಳು ಕುಸಿದು ಬಿದ್ದಿದೆ. ಕ್ಯಾಲನೂರಿನಲ್ಲಿ ನಾಲ್ಕು ಮನೆಗಳು ಕುಸಿದುಬಿದ್ದಿದ್ದು, ಗ್ರಾಪಂನಿಂದ ನಿರ್ಮಿಸುತ್ತಿರುವ ಕಟ್ಟಡದಲ್ಲಿ ನಿವಾಸಿಗಳಿಗೆ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎರಡು ಕೊಠಡಿ ಬಿದ್ದಿದೆ. ನರಸಾಪುರ ಕೈಗಾರಿಕಾ ಪ್ರದೇಶದ ರಸ್ತೆಗಳಲ್ಲಿ ಸಮರ್ಪಕವಾಗಿ ಮಳೆ ನೀರು ಚರಂಡಿ ಕಲ್ಪಿಸದಿರುವುದರಿಂದೆ ನೀರು ಹರಿದು ಹೋಗಲು ಸಾಧ್ಯವಾಗದೆ ಜಲಾವೃತಗೊಂಡಿತ್ತು. ಚಿಕ್ಕನಹಳ್ಳಿ ಬಳಿ ಭಾರೀ ಮರವೊಂದು ರಸ್ತೆಗೆ ಬಿದ್ದಿದ್ದರಿಂದ ಕೋಲಾರ-ಮಾಲೂರು ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತಾದರೂ ಮರ ತೆರವು ಕಾರ್ಯಾಚರಣೆ ನಂತರ ಸಂಚಾರ ಆರಂಭಗೊಂಡಿತು.
ನೀರು ಸೋರಿಕೆ ತಡೆಗಟ್ಟಲು ಸೂಚನೆ: ಜಿಲ್ಲೆಯಾದ್ಯಂತ ಭಾರಿ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ನಿರ್ವಹಣೆಯ ಕೊರತೆಯಿಂದ ಕೆರೆ-ಕಟ್ಟೆಗಳು ಶಿಥಿಲಗೊಂಡು ಒಡೆಯುವ ಭೀತಿ ಎದುರಾಗಿದೆ. ಅನೇಕ ಕೆರೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸಿ ಡಾ.ಆರ್.ಸೆಲ್ವಮಣಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ಕೆರೆಗಳನ್ನು ವೀಕ್ಷಿಸಿ ನೀರು ಸೋರಿಕೆ ತಡೆಗಟ್ಟಲು ಸೂಚನೆ ನೀಡಿದರು.
ಸರಾಸರಿ 95 ಮಿಮೀ ಮಳೆ ದಾಖಲು: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸರಾಸರಿ 95 ಮಿಮೀ ಮಳೆಯಾಗಿದೆ.
ಬಂಗಾರಪೇಟೆಯಲ್ಲಿ 104 ಮಿಮೀ ಮಳೆಯಾದರೆ, ಕೋಲಾರದಲ್ಲಿ 92 ಮಿಮೀ, ಮಾಲೂರಿನಲ್ಲಿ 114 ಮಿಮೀ, ಮುಳಬಾಗಿಲಿನಲ್ಲಿ 88 ಮಿಮೀ, ಶ್ರೀನಿವಾಸಪುರದಲ್ಲಿ 97 ಮಿಮೀ ಹಾಗೂ ಕೆಜಿಎಫ್‌ನಲ್ಲಿ 66 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ನವೆಂಬರ್ ತಿಂಗಳ ವಾಡಿಕೆ ಮಳೆ ಪ್ರಮಾಣ 48 ಮಿಮೀಗಳಾಗಿದ್ದು, ಈವರೆಗೆ 220 ಮಿಮೀ ಮಳೆಯಾಗುವ ಮೂಲಕ ಶೇ.355 ಹೆಚ್ಚುವರಿ ಮಳೆ ಬಿದ್ದಿದೆ. ಜನವರಿಯಿಂದ ನವೆಂಬರ್ ವರೆಗೆ ಒಟ್ಟು ವಾಡಿಕೆ ಮಳೆ 700 ಮಿಮೀಗಳಾಗಿದ್ದು, ಇಲ್ಲಿಯವರೆಗೆ 1237 ಮಿಮೀ ಬಳೆ ಸುರಿದಿದ್ದು, ಶೇ.77 ಹೆಚ್ಚುವರಿ ಮಳೆ ದಾಖಲಾಗಿದೆ.
ಸಂತ್ರಸ್ತರಿಗೆ ಕಾಳಜಿಕೇಂದ್ರದಲ್ಲಿ ಆಶ್ರಯ: ಬಂಗಾರಪೇಟೆ ತಾಲೂಕಿನಲ್ಲಿ ಸುರಿದ ಮಳೆಗೆ ಹುಣಸನಹಳ್ಳಿಯಲ್ಲಿ ಸುಮಾರು 200 ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತ ಕುಟುಂಬಗಳಿಗಾಗಿ ಗ್ರಾಮದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ತಾಲೂಕಿನಾದ್ಯಂತ 50ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಹುಣಸನಹಳ್ಳಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ತ ಕುಟುಂಬಗಳನ್ನು ತಾತ್ಕಾಲಿಕವಾಗಿ ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹುಣಸನಹಳ್ಳಿ ಜಂಬು ಕೆರೆಯಿಂದ ನೀರಿನ ಹೊರ ಹರಿವು ಹೆಚ್ಚಾದ ಕಾರಣಹುಣಸನಹಳ್ಳಿ ರೈಲ್ವೆ ಸೇತುವೆ ಬಳಿಯ ರಸ್ತೆಯಲ್ಲಿ ನೀರು ಹರಿದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಹಸೀಲ್ದಾರ್ ಗುರುವಾರ ರಾತ್ರಿಯಿಂದಲೇ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸಿ ಆನಂದ್ ಪ್ರಕಾಶ್ ಮೀನಾ ಮಳೆಯಿಂದ ಜಲಾವೃತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದರು. ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹುಣಸನಹಳ್ಳಿಯ ರೈಲ್ವೆ ಸೇತುವೆ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಮನೆ ಕಳೆದುಕೊಂಡವರಿಗೆ, ಮನೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ ಶವ ಪತ್ತೆ:
ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಹೋಬಳಿಯ ಎ-ಕೊತ್ತೂರು ಗ್ರಾಮದಲ್ಲಿ ಗುರುವಾರ ಕೊಚ್ಚಿ ಹೋಗಿದ್ದ ಮಹಿಳೆ ಅಮರಾವತಿ (65) ಎಂಬುವವರ ಶವ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ತೋಟದಿಂದ ಮನೆಗೆ ಬೈಕ್‌ನಲ್ಲಿ ಹೋಗುವಾಗ ಬದ್ದಿಪಲ್ಲಿ ನೀರಾವರಿ ಪ್ರಾಜೆಕ್ಟ್‌ಗಾಗಿ ನಿರ್ಮಿಸಿರುವ ಕಾಲುವೆಗೆ ಬೈಕ್ ಮಗುಚಿತ್ತು. ಬೈಕ್ ಸವಾರ ಬಾಬು ಪಾರಾಗಿದ್ದರೆ ಅಮರಾವತಿ ಕೊಚ್ಚಿ ಹೋಗಿದ್ದರು. ಪೊಲೀಸರು, ಆಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದರಾದರೂ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಶುಕ್ರವಾರ ಮತ್ತೆ ಶೋಧ ಮುಂದುವರಿಸಿದಾಗ ಮಧ್ಯಾಹ್ನ 3 ಗಂಟೆಯ ನಂತರ ಮಹಿಳೆ ಕೊಚ್ಚಿ ಹೋಗಿದ್ದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.
ಮುಳಬಾಗಿಲ್ಲಲಿ ಜನ ಜೀವನ ಅಸ್ತವ್ಯಸ್ತ: ಮುಳಬಾಗಿಲು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಳೆಯ ಮನೆಗಳು ಕುಸಿದು ಬೀಳುತ್ತಿದ್ದರೆ, ಸಿಮೆಂಟ್ ಮನೆಗಳೂ ಸಹಾ ಸುರಿಯುತ್ತಿದ್ದು ಜನರು ಮಳೆಯಲ್ಲಲ್ಲೇ ದಿನ ಕಳೆಯುವಂತಾಗಿದೆ. ಮುಳಬಾಗಿಲು ನಗರದಲ್ಲಿ 10, ಗ್ರಾಮಾಂತರದಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಮುಳಬಾಗಿಲು ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆ ಕೋಡಿ ನೀರು ರಾಘವೇಂದ್ರಸ್ವಾಮಿ ಮಠ, ಅಗ್ರಹಾರದ ಬಡಾವಣೆಗಳಲ್ಲಿ ನುಗ್ಗಿ ಮನೆಗಳಲ್ಲಿ ನೀರು ಬರುತ್ತಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.