ಸಾಗರದಲ್ಲಿ ಜಿಲ್ಲಾ ಜಾನಪದ ಸಮ್ಮೇಳನ ಮಾ.9ಕ್ಕೆ

janapada sammelana
Published on

ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ, ತಾಲೂಕು, ಹೋಬಳಿ ಸಮಿತಿ ಮತ್ತು ಚನ್ನಮ್ಮಾಜಿ ಜಾನಪದ ಕಲಾ ಸಂಘದ ಸಹಯೋಗದಲ್ಲಿ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನವನ್ನು ಸಾಗರ ತಾಲೂಕಿನ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಮಾ.9ರಂದು ಆಯೋಜಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.

ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಟಾಕಪ್ಪ ಬಿ. ಕಣ್ಣೂರು ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಚನ್ನಶೆಟ್ಟಿಕೊಪ್ಪ ಗ್ರಾಮದ ಗ್ರಾಮದೇವರ ಬನದ ಮುಂಭಾಗದಿಂದ ಜನಪದ ನಡಿಗೆ ಕಾರ್ಯಕ್ರಮವಿದೆ. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕತ್ತಿ ನಾರಾಯಣಪ್ಪ ಜಾನಪದ ನಡಿಗೆಗೆ ಚಾಲನೆ ನೀಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಮೈಸೂರಿನ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಸಮ್ಮೇಳನ ಉದ್ಘಾಟಿಸುವರು. ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ಅಧ್ಯಕ್ಷತೆ ವಹಿಸುವರು. ಸಚಿವ ಮಧು ಬಂಗಾರಪ್ಪ ಹಿರಿಯ ಕಲಾವಿದರನ್ನು ಸನ್ಮಾನಿಸುವರು. ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷ, ಈಸೂರಿನ ಲಾವಣಿ ಕಲಾವಿದ ಬೇಗೂರು ಶಿವಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಭಾಗವಹಿಸುವರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಾನಪದ ಲೋಕದ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಗುಡ್ಡಪ್ಪ ಜೋಗಿ, ಸಾಗರದ ಚರಕ ಗೌರಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದರು.

ಡೊಳ್ಳು, ಚೌಡಿಕೆ ಪದ, ಲಂಬಾಣಿ ನೃತ್ಯ, ದೇವಿ ಕುಣಿತ, ಹೂವಿನ ಕೋಲು, ಕೋಲಾಟ ಸೇರಿ ಸಮ್ಮೇಳನದಲ್ಲಿ 31 ಜನಪದ ಕಲಾ ತಂಡಗಳು ಭಾಗವಹಿಸಲಿವೆ. ಸಂಜೆ 6.30ಕ್ಕೆ ಸಮಾರೋಪದಲ್ಲಿ ಚನ್ನಮ್ಮಾಜಿ ಜಾನಪದ ಕಲಾತಂಡದ ಅಧ್ಯಕ್ಷ ಜಯಪ್ಪ ಹುರುಳಿ ಅಧ್ಯಕ್ಷತೆ ವಹಿಸುವರು. ಸಮ್ಮೇಳನಾಧ್ಯಕ್ಷರಾದ ಟಾಕಪ್ಪ ಬಿ. ಕಣ್ಣೂರು ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಜಿಪಂ ಸದಸ್ಯರಾದ ರತ್ನಾಕರ ಹೊನಗೋಡು, ಸಾಗರ ರೋಟರಿ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮುಖ್ಯ ಅತಿಥಿಗಳಾಗಿರುವರು ಎಂದು ಹೇಳಿದರು.

ಪರಿಷತ್ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಕೋಶಾಧ್ಯಕ್ಷ ಯು.ಮಧುಸೂಧನ್ ಐತಾಳ್, ಪದಾಧಿಕಾರಿಗಳಾದ ಹುರುಳಿ ಜಯಪ್ಪ, ಎಸ್.ನಾರಾಯಣ, ಸತ್ಯನಾರಾಯಣ ಸಿರಿವಂತೆ, ನಾಗರಾಜ್ ಜೋಗಿ, ಬಸವರಾಜ್, ಬಾಲರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net