ಜಿಲ್ಲಾ ಕಾಂಗ್ರೆಸ್‌ಗೆ ಚಂದ್ರಶೇಖರಗೌಡ ನೂತನ ಸಾರಥಿ?

25TMK_Chandrashekar_Gowda_DCC (1)
Published on

ತುಮಕೂರು: ನಿರೀಕ್ಷೆಯಂತೆಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಕೆಪಿಸಿಸಿ ಮುಂದಾಗಿದ್ದು, ನೂತನ ಅಧ್ಯಕ್ಷರಾಗಿ ಕಾಡುಗೊಲ್ಲ ಸಮುದಾಯದ ಚಂದ್ರಶೇಖರ್ ಗೌಡ ನೇಮಕವಾಗಲಿದ್ದಾರೆ ಎನ್ನಲಾಗಿದೆ. ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಪರಮಾಪ್ತ ಶಿಷ್ಯನಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿನ ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ.

ನೂತನ ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆ ಕಳೆದೊಂದು ವರ್ಷದಿಂದ ಕಾಂಗ್ರೆಸ್ ಮುಖಂಡರು ಸರಣಿ ಸಭೆ ನಡೆಸುತ್ತಲೇ ಇದ್ದರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಅಥವಾ ಲಿಂಗಾಯತರಿಗೆ ಜವಾಬ್ದಾರಿ ನೀಡುವ ಚಿಂತನೆ ನಡೆಸಿದ್ದರಾದರೂ ಕೊನೆಯ ಕ್ಷಣದಲ್ಲಿ ಹಿಂದುಳಿದ ವರ್ಗದ ಮುಖಂಡನಿಗೆ ಮಣೆಹಾಕಲಾಗಿದ್ದು ಒಂದೆರೆಡು ದಿನದಲ್ಲಿ ಆದೇಶ ಹೊರಬೀಳಲಿದೆ.

ಹಿರಿಯ ಮುಖಂಡರಾದ ಟಿ.ಬಿ.ಜಯಚಂದ್ರ, ಎಸ್.ಪಿ.ಮುದ್ದಹನುಮೇಗೌಡ ಜಿಲ್ಲಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕಾಡುಗೊಲ್ಲ ಸಮುದಾಯದ ಚಂದ್ರಶೇಖರ್‌ಗೌಡ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಒಲಿದುಬಂದಿದೆ. ಕಾಡುಗೊಲ್ಲ ಸಮುದಾಯದವರೇ ಆದ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು ಅವರಿಗೆ ಬಡ್ತಿ ನೀಡುವ ಪ್ರಸ್ತಾಪ ಕೈಬಿಟ್ಟು ಹೊಸ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ.

ವಿಧಾನ ಪರಿಷತ್ ಚುನಾವಣೆ ನಡುವೆಯೇ ಜಿಲ್ಲಾಧ್ಯಕ್ಷರ ಬದಲಾವಣೆ ಕಾಂಗ್ರೆಸ್‌ನಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ, ದಲಿತ ಸಮುದಾಯದ ಆರ್.ರಾಮಕೃಷ್ಣ ಬದಲಾವಣೆಯ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡಿರುವ ಕಾರಣವೇ ಜಿಲ್ಲೆಯಲ್ಲಿ ಅಹಿಂದ ಮತಬ್ಯಾಂಕ್ ಗಟ್ಟಿಗೊಳಿಸುವ ತಂತ್ರಗಾರಿಕೆಯಾಗಿದೆ.

ಸರ್ಪಒಕ್ಕಲಿಗ ಸಮುದಾಯದ ರಾಜ್ಯಾಧ್ಯಕ್ಷ ಡಾ.ಎಸ್.ಜಿ.ಪರಮೇಶ್ವರಪ್ಪ ಅವರನ್ನು ಕೂಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು ಜಿಲ್ಲಾ ಘಟಕದ ಪದಾಧಿಕಾರಿಗಳ ಬದಲಾವಣೆಗೂ ಕೆಪಿಸಿಸಿ ಮುಂದಾಗಿದೆ.

ಪರಮೇಶ್ವರ್ ಹಿಡಿತ ಮುಂದುವರಿಕೆ?: ಪ್ರಸ್ತುತ ಜಿಲ್ಲಾಧ್ಯಕ್ಷರಾಗಿರುವ ಆರ್.ರಾಮಕೃಷ್ಣ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ ಅವರ ನೆರಳಿನಲ್ಲಿಯೇ ಕಾರ್ಯನಿರ್ವಹಿಸಿದರು ಎಂಬ ದೂರು ಜಿಲ್ಲಾ ಮುಖಂಡರಲ್ಲಿದೆ, ಈಗಲೂ ಅವರ ಶಿಷ್ಯನಿಗೆ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದ್ದು ಇತರ ಮುಖಂಡರು ಹೇಗೆ ಒಪ್ಪಿಕೊಳ್ಳಲಿದ್ದಾರೆಯೇ ಎಂಬ ಕುತೂಹಲವಿದೆ.

ಗುಂಪುಗಾರಿಕೆಯಿಂದ ನಲುಗಿರುವ ಕಾಂಗ್ರೆಸ್ ಮುಖಂಡರು ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿ ಒಗ್ಗಟ್ಟಿನ ಮಂತ್ರ ಜಪಿಸುತ್ತಾರೆ ಎಂಬ ದೂರಿದೆ, ಎಲ್ಲ ಮುಖಂಡರನ್ನು ಒಟ್ಟಿಗೆ ಕರೆದೊಯ್ಯುವ ದೊಡ್ಡ ಜವಾಬ್ದಾರಿ ನೂತನ ಜಿಲ್ಲಾಧ್ಯಕ್ಷರ ಹೆಗಲಿಗೇರಲಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಪ್ರವಾಸ ಮಾಡುವುದು ಕಷ್ಟವಾಗಿದ್ದು, ಜತೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ನಾನು ಐದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ, ಒಂದೆರಡು ದಿನದಲ್ಲಿ ನೂತನ ಜಿಲ್ಲಾಧ್ಯಕ್ಷರ ನೇಮಕವಾಗಬಹುದು. ಆರ್.ರಾಮಕೃಷ್ಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net